ಯಾರಿದು ನ್ಯಾ.ಬೃಜ್ ಗೋಪಾಲ್ ಹರಕಿಶನ್ ಲೋಯಾ? ಏನಿದು ವಿವಾದ?

Update: 2018-01-12 14:11 GMT

  ಹೊಸದಿಲ್ಲಿ,ಜ.12: ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನಾಲ್ವರು ನ್ಯಾಯಾಧೀಶರ ಅಚ್ಚರಿದಾಯಕ ‘ಬಂಡಾಯ’ದ ಹಿಂದಿನ ಕಾರಣ ವಿಶೇಷ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಪ್ರಕರಣ ಎಂದು ಹೇಳಲಾಗಿದೆ. ಲೋಯಾ ಸಾವಿನ ಕುರಿತು ತನಿಖೆ ನಡೆಸಬೇಕೇ ಎನ್ನುವುದನ್ನು ನಿರ್ಧರಿಸಲು ಪ್ರಕರಣವನ್ನು ಒಪ್ಪಿಸಲಾಗಿರುವ ಪೀಠದ ಬಗ್ಗೆ ಈ ಹಿರಿಯ ನ್ಯಾಯಾಧೀಶರಿಗೆ ಅಸಮಾಧಾನವಿದೆ. 2014ರಲ್ಲಿ ಲೋಯಾ ಸಾವಿಗೂ ಮತ್ತು ಆ ಸಂದರ್ಭ ಅವರು ವಿಚಾರಣೆ ನಡೆಸುತ್ತಿದ್ದ ಏಕೈಕ ಪ್ರಕರಣಕ್ಕೂ ಸಂಬಂಧವಿದೆ ಎನ್ನವುದು ಲೋಯಾ ಕುಟುಂಬದ ಆರೋಪವಾಗಿದೆ. ಅದು ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನಲ್ಲಿ ಆಗ ಗುಜರಾತಿನ ಗೃಹಸಚಿವರಾಗಿದ್ದ ಹಾಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಸಿಬಿಐ ದಾಖಲಿಸಿದ್ದ ಕೊಲೆ ಪ್ರಕರಣವಾಗಿತ್ತು. ನ್ಯಾ.ಲೋಯಾ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಕೋರಿ ಪತ್ರಕರ್ತರೋರ್ವರು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು ‘ಇದೊಂದು ಗಂಭೀರ ವಿಷಯ’ ಎಂದು ಹೇಳಿದೆ.

ನ್ಯಾ.ಲೋಯಾ ಪ್ರಕರಣದ ಐದು ಪ್ರಮುಖ ಅಂಶಗಳು

►ನ್ಯಾ.ಲೋಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವ್ಯೆದ್ಯಕೀಯ ದಾಖಲೆಗಳು ತೋರಿಸುತ್ತಿವೆ. ಶಾ ಪರವಾಗಿ ತೀರ್ಪು ನೀಡಲು ಸಾವಿಗೆ ಕೆಲವೇ ದಿನಗಳ ಮೊದಲು 100 ಕೋ.ರೂ.ಗಳ ಕೊಡುಗೆಯನ್ನು ನ್ಯಾ.ಲೋಯಾರ ಮುಂದಿರಿಸಲಾಗಿತ್ತು ಎಂದು ಅವರ ಕುಟುಂಬವು ಆರೋಪಿಸಿದೆ.

►ನ್ಯಾ.ಲೋಯಾರ ನಿಧನದ ಎರಡು ವಾರಗಳ ಬಳಿಕ ಅವರ ಬದಲು ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಶಾ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ್ದರಲ್ಲದೆ ವಿಚಾರಣೆಯನ್ನು ತಳ್ಳಿಹಾಕಿದ್ದರು.

►ನ್ಯಾ.ಲೋಯಾ ಅವರು ಜೀವಂತವಿದ್ದ ಕೊನೆಯ ಕೆಲವು ಗಂಟೆಗಳಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ವೈದ್ಯರು ಅವರ ಕುಟುಂಬವು ವ್ಯಕ್ತಪಡಿಸಿರುವ ಶಂಕೆಗಳನ್ನು ತಳ್ಳಿಹಾಕಿದ್ದಾರೆ. ನ್ಯಾ.ಲೋಯಾರ ಸಾವಿನಲ್ಲಿ ಯಾವುದೇ ಮುಚ್ಚುಮರೆ ಅಥವಾ ನಿಗೂಢತೆಯ ಲಕ್ಷಣ ಇರಲಿಲ್ಲ ಎಂದು ಅವರೊಂದಿಗಿದ್ದ ನ್ಯಾ.ಭೂಷಣ್ ಗವಾಯಿ ಹೇಳಿದ್ದಾರೆ.

►ನ್ಯಾ.ಲೋಯಾ ಅವರನ್ನು ಸೂಕ್ತ ವೈದ್ಯಕೀಯ ನಿಗಾ ಇಲ್ಲದೆ ಆಟೋರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂಬ ಕುಟುಂಬದ ಹೇಳಿಕೆಯನ್ನು ನ್ಯಾ.ಗವಾಯಿ ತಿರಸ್ಕರಿಸಿದ್ದಾರೆ. ನ್ಯಾಯಾಲಯದ ಅಧಿಕಾರಿ ಮತ್ತು ಮುಂಬೈನ ಓರ್ವ ನ್ಯಾಯಾಧೀಶರು ಆಸ್ಪತ್ರೆಗೆ ಸಾಗಿಸುವಾಗ ನ್ಯಾ.ಲೋಯಾ ಜೊತೆಯಲ್ಲಿದ್ದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

►ಗುಜರಾತಿನಲ್ಲಿ ಚಿಲ್ಲರೆ ಕ್ರಿಮಿನಲ್ ಆಗಿದ್ದ ಸೊಹ್ರಾಬುದ್ದೀನ್‌ನನ್ನು 2005ರಲ್ಲಿ ನಕಲಿ ಎನ್ ಕೌಂಟರ್‌ನಲ್ಲಿ ಕೊಲ್ಲುವಂತೆ ಆದೇಶಿಸಿದ್ದ ಶಾ, ಆತನ ಪತ್ನಿ ಮತ್ತು ಸೊಹ್ರಾಬುದ್ದೀನ್ ಹತ್ಯೆಗೆ ಸಾಕ್ಷಿಯಾಗಿದ್ದ ಸ್ನೇಹಿತನ ಹತ್ಯೆಗಳಿಗೂ ಪ್ರಚೋದನೆ ನೀಡಿದ್ದರು ಎಂದು ಸಿಬಿಐ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News