ತ್ರಿಶೂರು ವಿದ್ಯಾರ್ಥಿ ಅಸಹಜ ಸಾವಿನ ಪ್ರಕರಣ ಸಿಬಿಐಗೆ ಹಸ್ತಾಂತರ

Update: 2018-01-12 16:54 GMT

ತಿರುವನಂತಪುರಂ, ಜ.12: ಕಳೆದ ವರ್ಷದ ಜನವರಿಯಲ್ಲಿ ತ್ರಿಶೂರು ಜಿಲ್ಲೆಯ ಕಾಲೇಜ್ ವಿದ್ಯಾರ್ಥಿಯೊಬ್ಬನ ಅಸಹಜ ಸಾವಿನ ಪ್ರಕರಣದ ತನಿಖೆ ಕೇರಳ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲ್ಪಟ್ಟಿದೆ.

ಕೇರಳದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಈ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಡಿಸೆಂಬರ್ 5ರಂದು ಸಿಬಿಐಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐನ ತಿರುವನಂತಪುರಂ ಘಟಕವು, ಗುರುವಾರ ಎರ್ನಾಕುಲಂನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ನ್ಯಾಯಾಲಯದ ಮುಂದೆ ಎಫ್‌ಐಆರ್ ಮರು ದಾಖಲಿಸಿತ್ತು. ಆದರೆ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಯಾರನ್ನೂ ಕೂಡಾ ಆರೋಪಿ ಗಳನ್ನಾಗಿ ಹೆಸರಿಸಿಲ್ಲ.

ತ್ರಿಶೂರಿನ ಪಂಬಾಡಿಯಲ್ಲಿರುವ ನೆಹರೂ ಎಂಜಿನಿಯರಿಂಗ್ ಹಾಗೂ ಸಂಶೋಧನಾ ಕೇಂದ್ರ ಕಾಲೇಜ್‌ನ ಪ್ರಥಮ ವರ್ಷದ ವಿದ್ಯಾರ್ಥಿ ಜಿಶ್ನು ಪ್ರಣಯ್‌ನ ಶವ ಕಳೆದ ವರ್ಷದ ಜನವರಿಯಲ್ಲಿ ತಾನಿದ್ದ ಹಾಸ್ಟೆಲ್ ಕೊಠಡಿಯಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

 ಜಿಶ್ನು, ಕಾಲೇಜ್ ಆಡಳಿತವರ್ಗದ ದೈಹಿಕ ಹಾಗೂ ಮಾನಸಿಕ ಕಿರುಕುಳ ಕ್ಕೊಳಗಾಗಿದ್ದನೆಂದು ಆತನ ಹೆತ್ತವರು ಆರೋಪಿಸಿದ್ದರು. ಜಿಶ್ನು ಸಹಪಾಠಿ ಅಮಲ್ ನೀಡಿದ ಹೇಳಿಕೆಯ ಆಧಾರದಲ್ಲಿ ಪಳಯನ್ನೂರು ಪೊಲೀಸರು ಜನವರಿ ಆರರಂದು ಪ್ರಕರಣ ದಾಖಲಿಸಿಕೊಂಡಿದ್ದರು.

2017ರ ಜನವರಿ 6ರಂದು ಕಾಲೇಜ್‌ನಲ್ಲಿ ಪರೀಕ್ಷೆ ನಡೆಯುತ್ತಿದ್ದಾಗ ಜಿಶ್ನು ನಕಲು ಮಾಡುತ್ತಿದ್ದಾಗ, ಆತ ಪರೀಕ್ಷಕರ ಕೈಗೆ ಸಿಕ್ಕಿಬಿದ್ದಿದ್ದ. ಘಟನೆಯಿಂದ ಮಾನಸಿಕ ಒತ್ತಡಕ್ಕೊಳಗಾದ ಆತ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಜಿಶ್ನುವಿನ ಸ್ನೇಹಿತರು ಆತನನ್ನು ರಕ್ಷಿಸಿ, ಒಟ್ಟಪಾಲಂನ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ವಿಫಲವಾಗಿ ಆತ ಕೊನೆಯುಸಿರೆಳೆದಿದ್ದ.

   ಜಿಶ್ನು ಆತ್ಮಹತ್ಯೆ ಮಾಡಿಕೊಂಡಿದ್ದನೆಂಬ ಪೊಲೀಸರ ಹೇಳಿಕೆಯನ್ನು ಪಾಲಕರು ಹಾಗೂ ಸ್ನೇಹಿತರು ನಿರಾಕರಿಸಿದ್ದರು. ಪ್ರಕರಣದ ಕೂಲಂಕುಶ ತನಿಖೆಗೆ ಆಗ್ರಹಿಸಿ ಅವರು ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ದೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News