ಡೇರಾ ಪದಾಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್

Update: 2018-01-12 14:26 GMT

ಪಂಚಕುಲ,ಜ.12: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಬಾ ಗುರ್ಮಿತ್‌ಸಿಂಗ್‌ನ ಡೇರಾಸಚ್ಚಾ ಸೌದಾದ ಇನ್ನೂ 10 ಮಂದಿ ಪದಾಧಿಕಾರಿಗಳ ವಿರುದ್ಧ ನಗರದ ಪೊಲೀಸರು ಶುಕ್ರವಾರ ಸ್ಥಳೀಯ ನ್ಯಾಯಾಲಯದಲ್ಲಿ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಕಳೆದ ವರ್ಷದ ಆಗಸ್ಟ್ 25ರಂದು ಪಂಚಕುಲಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ, ಭಾರತೀಯ ದಂಡಸಂಹಿತೆ (ಐಪಿಸಿ)ಯಡಿ ದೇಶದ್ರೋಹ, ಕ್ರಿಮಿನಲ್ ಸಂಚು ಹಾಗೂ ಇತರ ಅಪರಾಧಗಳಿಗೆ ಸಂಬಂಧಿಸಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

   ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾಸೌದ ವರಿಷ್ಠ ಬಾಬಾ ಗುರ್ಮಿತ್‌ಸಿಂಗ್ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ, ದೇರಾದ ಬೆಂಬಲಿಗರು ಹಾಗೂ ಭದ್ರತಾಸಂಸ್ಥೆಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಸುಮಾರು 42 ಮಂದಿ ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ಗುರ್ಮಿತ್‌ಸಿಂಗ್‌ನ ದತ್ತುಪುತ್ರಿ ಹನಿಪ್ರೀತ್ ಹಾಗೂ ಇತರ 11 ಮಂದಿಯ ವಿರುದ್ಧ ಈಗಾಗಲೇ ಕಳೆದ ವರ್ಷದ ನವೆಂಬರ್ 28ರಂದು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಅಕ್ಟೋಬರ್ 3ರಂದು ಹನಿಪ್ರೀತ್ ಪೊಲೀಸರಿಗೆ ಶರಣಾಗುವ ತನಕ ಆಕೆಗೆ ಆಶ್ರಯ ನೀಡಿದ್ದ ಇತರ ಮೂವರ ವಿರುದ್ಧವೂ ಚಾರ್ಜ್‌ಶೀಟ್ ದಾಖಲಿಸಲಾಗಿತ್ತು.

 ಗುರುವಾರದಂದು ಸಲ್ಲಿಕೆಯಾದ ದೋಷಾರೋಪಪಟ್ಟಿಯಲ್ಲಿ ಡೇರಾದ ಪದಾಧಿಕಾರಿಗಳಾದ ಪವನ್ ಇನ್ಸಾನ್, ವೇದ್ ಪ್ರಕಾಶ್, ರಾಜಿಂದರ್‌ಸಿಂಗ್, ರಮೇಶ್ ಕುಮಾರ್, ಭೀಮ್‌ಸೇನ್, ಹರಿಕೇಶ್, ರಾಜ್‌ಕುಮಾರ್, ರಣಬೀರ್, ಡಾ.ದಲ್ಜಿತ್‌ಸಿಂಗ್ ಹಾಗೂ ಬಲರಾಜ್ ಅವರ ಹೆಸರುಗಳಿವೆ.

ಪಂಚಕುಲದಲ್ಲಿ ನಡೆದ ಹಿಂಸಾಚಾರದ ಸಂಚಿನ ಪಾತ್ರವಹಿಸಿದ್ದಾರೆಂಬ ಆರೋಪಗಳಿಗೆ ಸಂಬಂಧಿಸಿ ಅವರನ್ನು ಒಂದೂವರೆ ತಿಂಗಳುಗಳ ಹಿಂದೆ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News