ಐತಿಹಾಸಿಕ ಪತ್ರಿಕಾಗೋಷ್ಠಿ : ನ್ಯಾ. ಚಲಮೇಶ್ವರ್, ನ್ಯಾ. ಗೊಗೊಯ್ ಹೇಳಿದ್ದೇನು ?

Update: 2018-01-12 14:38 GMT

ಹೊಸದಿಲ್ಲಿ,ಜ.12:ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯ ಮೂರ್ತಿಗಳು ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನ್ಯಾಯಮೂರ್ತಿಗಳಾದ ಚಲಮೇಶ್ವರ್ ಹಾಗೂ ರಂಜನ್ ಗೊಗೊಯ್ ವ್ಯಕ್ತಪಡಿಸಿದ ಅಭಿಪ್ರಾಯಗಳಿವು.

 ನ್ಯಾಯಮೂರ್ತಿ ಚಲಮೇಶ್ವರ್: ನ್ಯಾಯಾಂಗ ಸಂಸ್ಥೆಯ ಇತಿಹಾಸದಲ್ಲೇ ಹಾಗೂ ದೇಶದ ಇತಿಹಾಸದಲ್ಲೇ ಇದೊಂದು ಅಸಾಧಾರಣ ಘಟನೆ. ಇದು ರಾಜಕೀಯ ಸಭೆಯಲ್ಲ. ಕೆಲವೊಮ್ಮೆ ಸುಪ್ರೀಂಕೋರ್ಟ್‌ನ ಆಡಳಿತವು ಸುವ್ಯವಸ್ಥಿತವಾಗಿಲ್ಲ ಹಾಗೂ ಕಳೆದ ಕೆಲವು ತಿಂಗಳಲ್ಲಿ ಅನಪೇಕ್ಷಿತವಾದ ಸಂಗತಿಗಳು ನಡೆದಿವೆ.

  ಸುಮಾರು ಎರಡು ತಿಂಗಳ ಹಿಂದೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಪತ್ರ ಬರೆದಿದ್ದೆವು. ನಿರ್ದಿಷ್ಟ ವಿಷಯವೊಂದು ನಿರ್ದಿಷ್ಟವಾದ ರೀತಿಯಲ್ಲಿ ನಡೆಯ ಬೇಕೆಂದು ನಾವು ಬಯಸಿದ್ದೆವು.ಆದರೆ ಅದು ನ್ಯಾಯಾಂಗ ಸಂಸ್ಥೆಯ ಪ್ರಾಮಾ ಣಿಕತೆಯನ್ನು ಪ್ರಶ್ನಿಸುವಂತಹ ರೀತಿಯಲ್ಲಿ ನಡೆದಿತ್ತು. ನಿರ್ದಿಷ್ಟ ಕೋರಿಕೆಯೊಂದಿಗೆ ನಾವು ನಾಲ್ವರು, ಇಂದು ಬೆಳಗ್ಗೆ ಸಿಜೆಐ ಅವರನ್ನು ಭೇಟಿಯಾಗಲು ತೆರಳಿದ್ದೆವು. ಆದರೆ ದುರದೃಷ್ಟವಶಾತ್, ಈ ಬಗ್ಗೆ ಸೂಕ್ತವಾದ ಹಾಗೂ ಸಮರ್ಪಕವಾದ ಕ್ರಮವನ್ನು ಕೈಗೊಳ್ಳಬೇಕೆಂದು ಅವರಿಗೆ ಮನದಟ್ಟು ಮಾಡಲು ನಮಗೆ ಸಾಧ್ಯವಾಗಲಿಲ್ಲ. ದೇಶಕ್ಕೆ ಈ ಬಗ್ಗೆ ತಿಳಿಸುವ ಹೊರತಾಗಿ ಬೇರೆ ಯಾವುದೇ ಆಯ್ಕೆ ನಮ್ಮ ಮುಂದಿರಲಿಲ್ಲ.

    ನಮ್ಮ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಹಾಗೂ ಈ ಸಂಸ್ಥೆ (ನ್ಯಾಯಾಂಗ)ಯನ್ನು ಸಂರಕ್ಷಿಸದೆ ಇದ್ದಲ್ಲಿ ಹಾಗೂ ಅದರ ಸಮಚಿತ್ತತೆಯನ್ನು ಕಾಪಾಡದೆ ಇದ್ದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಬದುಕುಳಿಯಲಾರದು.ನಿಷ್ಪಕ್ಷಪಾತ ಹಾಗೂ ಸ್ವತಂತ್ರ ನ್ಯಾಯಾಂಗವು ಒಂದು ಉತ್ತಮ ಪ್ರಜಾಪ್ರಭುತ್ವದ ಹೆಗ್ಗುರುತಾಗಿದೆ.

   ಬಹಳಷ್ಟು ಮೇಧಾವಿಗಳು, ಈ ದೇಶದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. 20 ವರ್ಷಗಳ ನಂತರ ಕೆಲವು ಜ್ಞಾನಿಗಳು ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ಗೊಗೊಯ್, ಲೋಕುರ್ ಹಾಗೂ ಕುರಿಯನ್ ಜೋಸೆಫ್ ಅವರು ತಮ್ಮ ಆತ್ಮಗಳನ್ನು ಮಾರಾಟ ಮಾಡಿದ್ದಾರೆ ಹಾಗೂ ನ್ಯಾಯಾಂಗ ಸಂಸ್ಥೆಯ ಪಾಲನೆಯ ಹೊಣೆಹೊತ್ತುಕೊಂಡಿದ್ದರೂ, ಅವರು ಸರಿಯಾಗಿ ನಡೆದುಕೊಳ್ಳಲಿಲ್ಲವೆಂದು ದೂರುವುದು ನಮಗೆ ಬೇಕಾಗಿಲ್ಲ.

ನ್ಯಾಯಮೂರ್ತಿ ಗೊಗೊಯ್:  ನಮ್ಮ ಅಹವಾಲನ್ನು ನಾವು ದೇಶದ ಜನತೆಯ ಮುಂದಿಟ್ಟಿದ್ದೇವೆ. ನಮ್ಮನ್ನು ಇಲ್ಲಿಗೆ ತಂದು, ಏನು ವಿಷಯವೆಂಬುದನ್ನು ದೇಶಕ್ಕೆ ತಿಳಿಸುವ ಮೂಲಕ ದೇಶದ ಋಣವನ್ನು ತೀರಿಸುತ್ತಿದ್ದೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News