ಮಂಗಳೂರು: ಫೆ.2ರಿಂದ ರಾಜ್ಯ ಮಟ್ಟದ ಯುವಜನ ಮೇಳ: ಜಿಲ್ಲಾಧಿಕಾರಿ

Update: 2018-01-12 16:55 GMT

ಮಂಗಳೂರು, ಜ.12: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಯುವಜನಮೇಳವು ಫೆ.2ರಿಂದ ಮೂರು ದಿನಗಳ ಕಾಲ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನಡೆಯಲಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿ ಕೋರ್ಟ್‌ಹಾಲ್‌ನಲ್ಲಿ ನಡೆದ ಯುವಜನ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಮೇಳದ ಆಯೋಜನೆಯನ್ನು ಮಾಡುತ್ತಿದ್ದು, ಇದರಲ್ಲಿ 30 ಜಿಲ್ಲೆಗಳ ಸುಮಾರು 5000 ಯುವಜನತೆಯ ಭಾಗವಸುವಿಕೆಯನ್ನು ನಿರೀಕ್ಷಿಸಲಾಗಿದ್ದು ಕಾರ್ಯಕ್ರಮದ ಆಯೋಜನೆಗೆ ವಿವಿಧ ಸಮಿತಿಯನ್ನು ರಚಿಸಿ ಅಧಿಕಾರಿಯನ್ನು ನೇಮಿಸಲು ಸೂಚನೆ ನೀಡಿದರು. ಬೇರೆ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಿಗಳಿಗೆ ವಸತಿ ವ್ಯವಸ್ಥೆಯ ಜೊತೆಗೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಅವರು ಸೂಚಿಸಿದರು.

ಈ ಯುವಜನ ಮೇಳಕ್ಕೆ ಸರಕಾರದಿಂದ 40 ಲಕ್ಷ ಅನುದಾನವನ್ನು ಹಾಗೂ ಯುವಜನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 5 ಲಕ್ಷದ ಅನುದಾನವನ್ನು ನೀಡಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಯುವಜನಮೇಳವು ನಡೆಯುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಪುತ್ತೂರಿನ ಸೈಂಟ್ ಫಿಲೋಮಿುನಾ ಕಾಲೇಜ್, ಸರಕಾರಿ ಪದವಿಪೂರ್ವ ಕಾಲೇಜ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಪದವಿ ಪೂರ್ವ ಕಾಲೇಜ್, ಸ್ವಾಮಿ ಕಲಾ ಮಂದಿರ ಪುತ್ತೂರು, ಒಕ್ಕಲಿಗ ಸಮುದಾಯ ಭವನ ಇಲ್ಲಿ ವಸತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಜೊತೆಗೆ ಅನೇಕ ಸರಕಾರೇತರ ಸಂಸ್ಥೆಗಳು ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿಕೊಂಡಿವೆ.

ಸಭೆಯಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಕ್ರೀಡಾಧಿಕಾರಿ ಲಿಲ್ಲಿ ಪಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News