ತಿರುಗೇಟು ನೀಡಲು ಕೊಹ್ಲಿ ಪಡೆ ಸಂಕಲ್ಪ

Update: 2018-01-12 18:02 GMT

ಸೆಂಚೂರಿಯನ್,ಜ.12: ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದ ಟೀಮ್ ಇಂಡಿಯಾ ಶನಿವಾರ ಇಲ್ಲಿ ಆರಂಭವಾಗಲಿರುವ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಗೆಲ್ಲುವ ಸಂಕಲ್ಪ ಮಾಡಿದೆ.

ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ದಕ್ಷಿಣ ಆಫ್ರಿಕ ತಂಡ ಇನ್ನೊಂದು ಪಂದ್ಯದಲ್ಲಿ ಜಯ ಗಳಿಸಿದರೆ 3 ಪಂದ್ಯಗಳ ಸರಣಿಯನ್ನು 2-0 ಮುನ್ನಡೆಯೊಂದಿಗೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.

 ಭಾರತಕ್ಕೆ ಎರಡನೇ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ. ಒಂದು ವೇಳೆ ಭಾರತ ಸೋತರೆ ಸತತ 9 ಸರಣಿಗಳಲ್ಲಿ ಗೆಲುವಿನ ಅಭಿಯಾನ ಕೊನೆಗೊಳ್ಳಲಿದೆ. ಮೊದಲ ಟೆಸ್ಟ್‌ನಲ್ಲಿ 72 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ ಟೀಮ್ ಇಂಡಿಯಾಕ್ಕೆ ಹೊಸ ಸವಾಲು ಎದುರಾಗಲಿದೆ. ಸೆಂಚೂರಿಯನ್ ಟೆಸ್ಟ್‌ನ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಲೋಕೇಶ್ ರಾಹುಲ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಎದುರು ನೋಡುತ್ತಿದ್ದಾರೆ.

    ಭಾರತ ತಂಡ 2018ರಲ್ಲಿ ಟೆಸ್ಟ್‌ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ.2018-19ರಲ್ಲಿ ಭಾರತ ವಿದೇಶದಲ್ಲಿ 12 ಟೆಸ್ಟ್‌ಗಳನ್ನು ಆಡಲಿದೆ. ಭಾರತದ ವಿರುದ್ಧ ಆಫ್ರಿಕ 2-0 ಅಂತರದಲ್ಲಿ ಜಯ ಗಳಿಸಿದರೂ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆಯಲು ಸಾಧ್ಯವಿಲ್ಲ. ಸೆಂಚೂರಿಯನ್‌ನಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಇಲ್ಲಿ ದಕ್ಷಿಣ ಆಫ್ರಿಕ ಹೆಚ್ಚು ಬಲಿಷ್ಠವಾಗಿದೆ. ಭಾರತ ಸೇರಿದಂತೆ ವಿಶ್ವದ ನಾನಾ ತಂಡಗಳು ಇಲ್ಲಿ ಈ ಹಿಂದೆ ಟೆಸ್ಟ್ ಆಡಿ ಹೀನಾಯ ಸೋಲಿನೊಂದಿಗೆ ವಾಪಸಾಗಿದ್ದವು. ಇಲ್ಲಿ 22 ಟೆಸ್ಟ್‌ಗಳನ್ನು ಆಡಲಾಗಿತ್ತು. ಎರಡು ದ್ವಿಶತಕಗಳು ಸೇರಿದಂತೆ 39 ಶತಕಗಳು ದಾಖಲಾಗಿವೆ. ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕ ಎರಡನೇ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಸರಣಿ ಗೆಲುವಿನ ಕನಸು ಕಾಣುತ್ತಿದೆ.

ಸ್ಪಾಟ್‌ಲೈಟ್: ದಕ್ಷಿಣ ಆಫ್ರಿಕ ತಂಡದಲ್ಲಿ ಡೇಲ್ ಸ್ಟೇಯ್ನಿ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.ಮೊರ್ನೆ ಮೊರ್ಕೆಲ್ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವರು. ಅವರಿಗೆ ಈ ಕ್ರೀಡಾಂಗಣದಲ್ಲಿ ಆಡಿರುವ ಸಾಕಷ್ಟು ಅನುಭವ ಇದೆ. ವೇಗಿ ವೆರ್ನಾನ್ ಫಿಲ್ಯಾಂಡರ್ ಕಳೆದ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು. ರಬಾಡ ಅವರು ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಎರಡೂವರೆ ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿದ್ದರು. ಆದರೆ ಅವರಿಗೆ 26 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.

ತಂಡದ ಸಮಾಚಾರ: ದಕ್ಷಿಣ ಆಫ್ರಿಕ ತಂಡ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಸ್ಟೇಯ್ನಿ ಜಾಗಕ್ಕೆ ಕ್ರಿಸ್ ಮೋರಿಸ್, ಲುಂಗಿ ನೆಗಿಡಿ ಮತ್ತು ಆ್ಯಂಡ್ಲೆ ಫೆಹ್ಲುಕಾವ್ ಮತ್ತು ದುವನ ಆಲಿವರ್ ಕಣ್ಣಿಟ್ಟಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ನಲ್ಲಿ ತಂಡದಲ್ಲಿ ಬದಲಾವಣೆಯ ಬಗ್ಗೆ ಸುಳಿವು ನೀಡಿಲ್ಲ. ಹಾರ್ದಿಕ್ ಪಾಂಡ್ಯ ಎರಡನೇ ಟೆಸ್ಟ್‌ನಲ್ಲೂ ತನ್ನ ಅಪೂರ್ವ ಫಾರ್ಮ್ ನ್ನು ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ.

ಸಂಭಾವ್ಯ ತಂಡ

►ಭಾರತ:ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್,ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

►ದಕ್ಷಿಣ ಆಫ್ರಿಕ: ಎಫ್ ಡು ಪ್ಲೆಸಿಸ್(ನಾಯಕ), ಡೀನ್ ಎಲ್ಗರ್, ಏಡೆನ್ ಮಾರ್ಕರಮ್, ಹಾಶಿಮ್ ಅಮ್ಲ, ಎಬಿ ಡಿವಿಲಿಯರ್ಸ್‌, ಕ್ವಿಂಟನ್ ಡೆ ಕಾಕ್, ವೆರ್ನಾನ್ ಫಿಲ್ಯಾಂಡರ್, ಕ್ರಿಸ್ ಮೋರಿಸ್, /ಲುಂಗಿ ನೆಗಡಿ,ಕೇಶವ್ ಮಹಾರಾಜ್,ಕಾಗಿಸೊ ರಬಾಡ, ಮೊರ್ನೆ ಮೊರ್ಕೆಲ್.

ಪಂದ್ಯದ ಸಮಯ: ಮಧ್ಯಾಹ್ನ 2:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News