ಭಾರತ ತಂಡ ಪ್ರಕಟ: ದ್ಯುತಿ ಚಂದ್ ಗೆ ಸ್ಥಾನ

Update: 2018-01-12 18:17 GMT

ಹೊಸದಿಲ್ಲಿ, ಜ.12: ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಭಾರತ ಪ್ರಕಟಿಸಿರುವ 13 ಸದಸ್ಯರ ತಂಡದಲ್ಲಿ ಓಟಗಾರ್ತಿ ದ್ಯುತಿ ಚಂದ್ ಸ್ಥಾನ ಪಡೆದಿದ್ದಾರೆ.

 8ನೇ ಆವೃತ್ತಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಇರಾನ್‌ನ ಟೆಹ್ರಾನ್‌ನಲ್ಲಿ ಫೆ.1 ರಿಂದ 3ರ ತನಕ ನಡೆಯಲಿದೆ. 21ರ ಹರೆಯದ ದ್ಯುತಿ ಕಳೆದ ವರ್ಷ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಹಾಗೂ 4-100 ಮೀ. ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆಯ್ಕೆಯಾಗಿರುವ ಶಾಟ್ ಪುಟ್ ತಾರೆ ಓಂ ಪ್ರಕಾಶ್ ಸಿಂಗ್ ಏಷ್ಯನ್ ಇಂಡೋರ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಈ ವರ್ಷದ ಆಗಸ್ಟ್ 18ರಿಂದ ಸೆ.2ರ ತನಕ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಪೂರ್ವಭಾವಿಯಾಗಿ ಫೆ.11 ರಿಂದ 14ರ ತನಕ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟೆಸ್ಟ್ ಪಂದ್ಯಾವಳಿಗೆ 36 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಏಷ್ಯನ್ ಚಾಂಪಿಯನ್ ದೂರ ಅಂತರದ ಓಟಗಾರ ಜಿ.ಲಕ್ಷ್ಮಣನ್ ಆಯ್ಕೆಯಾಗಿದ್ದಾರೆ. ಭಾರತದ ಅಥ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷ ಜಿ.ಎಸ್. ರಾಂಧವಾ ಅಧ್ಯಕ್ಷತೆಯ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಿದೆ.

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಭಾರತ ತಂಡ

►ಪುರುಷರು: ಮುಹಮ್ಮದ್ ಸಾದಾತ್, ಇಲಕ್ಯ ದಾಸನ್(60 ಮೀ.), ಶಂಶೀರ್ ಎಸ್.ಇ. ಹಾಗೂ ಶ್ರೀ ಶಂಕರ್(ಲಾಂಗ್ ಜಂಪ್), ಅರ್ಪಿಂದರ್ ಸಿಂಗ್, ಕಮಲ್ ರಾಜ್(ಟ್ರಿಪಲ್ ಜಂಪ್), ತಾಜಿಂದರ್ ಸಿಂಗ್, ಓಂ ಪ್ರಕಾಶ್ ಸಿಂಗ್(ಶಾಟ್‌ಪುಟ್).

►ಮಹಿಳೆಯರು: ದ್ಯುತಿ ಚಂದ್(60 ಮೀ.), ಸಂಜೀವಿನಿ ಜಾಧವ್(3,000 ಮೀ.),ನಯನಾ ಜೇಮ್ಸ್,ನೀನಾ ವರಾಕಿಲ್(ಲಾಂಗ್‌ಜಂಪ್) ಹಾಗೂ ಶೀನಾ ಎನ್.ವಿ.(ಟ್ರಿಪಲ್ ಜಂಪ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News