ಕರ್ನಾಟಕಕ್ಕೆ ಭರ್ಜರಿ ಜಯ

Update: 2018-01-12 18:24 GMT

ವಿಶಾಖಪಟ್ಟಣ, ಜ.12: ಆರಂಭಿಕ ಆಟಗಾರ ಕರುಣ್ ನಾಯರ್ ಕೇವಲ 48 ಎಸೆತಗಳಲ್ಲಿ ಸಿಡಿಸಿದ ಶತಕದ ಸಹಾಯದಿಂದ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಲೀಗ್‌ನಲ್ಲಿ ಭರ್ಜರಿ ಜಯ ಸಾಧಿಸಿದೆ.

ಹೈದರಾಬಾದ್ ವಿರುದ್ಧ ಗುರುವಾರ ಅಂಪೈರ್ ವಿವಾದಾತ್ಮಕ ನಿರ್ಣಯದ ನೆರವಿನಿಂದ ರೋಚಕ ಜಯ ಸಾಧಿಸಿದ್ದ ಕರ್ನಾಟಕ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

ಇಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ತಮಿಳುನಾಡು ತಂಡ ಪ್ರವೀಣ್ ದುಬೆ(4-19) ಹಾಗೂ ಕೆ.ಗೌತಮ್(2-14) ದಾಳಿಗೆ ತತ್ತರಿಸಿ 16.3 ಓವರ್‌ಗಳಲ್ಲಿ ಕೇವಲ 101 ರನ್‌ಗೆ ಆಲೌಟಾಯಿತು. 78 ರನ್‌ನಿಂದ ಸೋಲೊಪ್ಪಿಕೊಂಡಿತು.

ತಮಿಳುನಾಡು ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಅಭಿನವ್ ಮುಕುಂದ್(1) ಹಾಗೂ ದಿನೇಶ್ ಕಾರ್ತಿಕ್(0) ವಿಕೆಟ್‌ನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ತಂಡದ ಸ್ಕೋರ್ 2 ವಿಕೆಟ್‌ಗೆ 6 ರನ್.

ನಾಯಕ ವಿಜಯ್ ಶಂಕರ್(20) ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್(34)ತಂಡವನ್ನು ಆಧರಿಸಿದರು. ಸುಂದರ್ ಹಾಗೂ ವಿಜಯ್ ಸತತ ಓವರ್‌ಗಳಲ್ಲಿ ಔಟಾದ ಬಳಿಕ ತಮಿಳುನಾಡು ಸಂಕಷ್ಟಕ್ಕೆ ಸಿಲುಕಿತು.

ಸಂಜಯ್ ಯಾದವ್(19) ಹಾಗೂ ಜಗದೀಶನ್(16) ಉತ್ತಮ ಆರಂಭ ಪಡೆದಿದ್ದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಪ್ರವೀಣ್ ದುಬೆ(4-19) ಬೌಲಿಂಗ್‌ನಲ್ಲಿ ಮಿಂಚಿದ್ದು, ಸಹ ಆಟಗಾರರಾದ ಗೌತಮ್(2-14),ಅರವಿಂದ್(1-14) ಹಾಗೂ ಸ್ಟುವರ್ಟ್ ಬಿನ್ನಿ(1-18) ದುಬೆಗೆ ಸಮರ್ಥ ಸಾಥ್ ನೀಡಿದರು.

►ನಾಯರ್ ಶತಕ, ಕರ್ನಾಟಕ 179/9:

   ಆರಂಭಿಕ ಬ್ಯಾಟ್ಸ್ ಮನ್ ಕರುಣ್ ನಾಯರ್ ಏಕಾಂಗಿ ಹೋರಾಟ ನೀಡಿ ಕರ್ನಾಟಕ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ನಾಯರ್ ಅವರ 111 ರನ್ ಇನಿಂಗ್ಸ್‌ನಲ್ಲಿ 8 ಬೌಂಡರಿ, 8 ಸಿಕ್ಸರ್‌ಗಳಿದ್ದವು. ಕರ್ನಾಟಕ ಇನಿಂಗ್ಸ್‌ನಲ್ಲಿ ಮಾಯಾಂಕ್ ಅಗರವಾಲ್(13) ಹಾಗೂ ಆರ್.ಸಮರ್ಥ್(19)ಹೊರತುಪಡಿಸಿ ಉಳಿದವರು ಎರಡಂಕೆ ಸ್ಕೋರ್ ದಾಖಲಿಸಲೂ ವಿಫಲರಾದರು.

ತಮಿಳುನಾಡಿನ ಪರ ಚೊಚ್ಚಲ ಟ್ವೆಂಟಿ-20 ಪಂದ್ಯ ಆಡಿರುವ ವೇಗಿ ವಿಎ ಡೇವಿಡ್‌ಸನ್(5-30) ಐದು ವಿಕೆಟ್ ಗೊಂಚಲು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

►ಕರ್ನಾಟಕ: 20 ಓವರ್‌ಗಳಲ್ಲಿ 179/9

(ಕರುಣ್ ನಾಯರ್ 111,ಆರ್.ಸಮರ್ಥ್ 19, ಡೇವಿಡ್‌ಸನ್ 5-30, ಅಶ್ವಿನ್ 2-33)

►ತಮಿಳುನಾಡು: 16.3 ಓವರ್‌ಗಳಲ್ಲಿ 101/10

(ವಾಶಿಂಗ್ಟನ್ ಸುಂದರ್ 34, ವಿಜಯ್ ಶಂಕರ್ 20, ಜಗದೀಶನ್ 16, ಪ್ರವೀಣ್ ದುಬೆ 4-19, ಕೆ.ಗೌತಮ್ 2-14)

ಯುವರಾಜ್ ವಿಫಲ, ಮಿಂಚಿದ ಮಿಶ್ರಾ

ಹರ್ಭಜನ್ ಸಿಂಗ್ ನೇತೃತ್ವದ ಪಂಜಾಬ್ ತಂಡ ಅಮಿತ್ ಮಿಶ್ರಾ ನಾಯಕತ್ವದ ಹರ್ಯಾಣ ತಂಡದ ಬೌಲಿಂಗ್ ದಾಳಿಗೆ ನಿರುತ್ತರವಾಯಿತು.

ಮನನ್ ವೋರಾ ಹಾಗೂ ಮನ್‌ದೀಪ್ ಸಿಂಗ್ ನೆರವಿನಿಂದ ಪಂಜಾಬ್ ಉತ್ತಮ ಆರಂಭ ಪಡೆದಿತ್ತು. ಆದರೆ, ಸತತ ವಿಕೆಟ್‌ಗಳನ್ನು ಕಳೆದುಕೊಂಡ ಪಂಜಾಬ್ ಹಿನ್ನಡೆ ಕಂಡಿತು. ಯುವರಾಜ್ ಸಿಂಗ್ 16 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಬ್ಯಾಟಿಂಗ್‌ನಲ್ಲಿ ವಿಫಲರಾದರು.

ಲೆಗ್ ಸ್ಪಿನ್ನರ್ ಮಿಶ್ರಾ ಮೂವರು ಪ್ರಮುಖ ಆಟಗಾರರಾದ ಮನ್‌ದೀಪ್, ಗುರುಕೀರತ್ ಹಾಗೂ ಅಭಿಷೇಕ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಮಿಶ್ರಾ 4 ಓವರ್‌ಗಳಲ್ಲಿ 23 ರನ್‌ಗೆ 3 ವಿಕೆಟ್ ಪಡೆದರು. ದಿಲ್ಲಿಗೆ ಸುಲಭ ಗೆಲುವು ತಂದುಕೊಟ್ಟ ರಿಷಬ್: ಮುಶ್ತಾಕ್ ಅಲಿ ಟ್ವೆಂಟಿ-20 ಲೀಗ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ದಿಲ್ಲಿಯ ಆಲ್‌ರೌಂಡ್ ಪ್ರದರ್ಶನಕ್ಕೆ ಕಂಗಾಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಾಶ್ಮೀರ ತಂಡವನ್ನು ದಿಲ್ಲಿಯ ಪವನ್ ನೇಗಿ, ಪ್ರದೀಪ್ ಸಾಂಗ್ವಾನ್ ಹಾಗೂ ನವ್‌ದೀಪ್ ಸೈನಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 100 ರನ್‌ಗೆ ನಿಯಂತ್ರಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ದಿಲ್ಲಿ ತಂಡ ರಿಷಬ್ ಪಂತ್ ಅರ್ಧಶತಕ(51ರನ್, 33 ಎಸೆತ) ನೆರವಿನಿಂದ ಗೆಲುವಿನ ದಡ ಸೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News