ಸರ್ಜುಬಾಲಾ, ಸೋನಿಯಾ, ಸರಿತಾಗೆ ಸ್ವರ್ಣ ಸಂಭ್ರಮ

Update: 2018-01-12 18:28 GMT

ರೋಹ್ಟಕ್, ಜ.12: ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಣಿಪುರವನ್ನು ಪ್ರತಿನಿಧಿಸಿದ ಸರ್ಜುಬಾಲಾ ದೇವಿ(48 ಕೆಜಿ) ಚಿನ್ನದ ಪದಕ ಜಯಿಸಿದರು. ರೈಲ್ವೇಸ್ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್(ಆರ್‌ಎಸ್‌ಪಿಬಿ)ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.

 ಶನಿವಾರ ನಡೆದ ಫೈನಲ್‌ನಲ್ಲಿ ಸರ್ಜುಬಾಲಾ ಹರ್ಯಾಣದ ರಿತೂ ಅವರನ್ನು 3-2 ಅಂತರದಿಂದ ರೋಚಕವಾಗಿ ಸೋಲಿಸಿ ಸತತ ಎರಡನೇ ರಾಷ್ಟ್ರೀಯ ಪ್ರಶಸ್ತಿ ಜಯಿಸಿದರು. ಅಖಿಲ ಭಾರತ ಪೊಲೀಸ್(ಎಐಪಿ) ತಂಡವನ್ನು ಪ್ರತಿನಿಧಿಸಿರುವ ಮಾಜಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಸರಿತಾ ದೇವಿ(60ಕೆಜಿ) ರೈಲ್ವೇಸ್ ಬೋರ್ಡ್ ನ ಪವಿತ್ರಾರನ್ನು ಫೈನಲ್‌ನಲ್ಲಿ ಸೋಲಿಸಿ ಚಿನ್ನ ತನ್ನದಾಗಿಸಿಕೊಂಡರು.

ರೈಲ್ವೇಸ್ ಬೋರ್ಡ್‌ನ ಸೋನಿಯಾ ಲಾಥರ್ ಹಾಗೂ ವಿಶ್ವ ಯೂತ್ ಚಾಂಪಿಯನ್ ಶಶಿ ಚೋಪ್ರಾ ನಡುವೆ 57 ಕೆಜಿ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಹರ್ಯಾಣದ ಸೋನಿಯಾ 5-0 ಅಂತರದಿಂದ ಜಯ ಸಾಧಿಸಿದರು. 54 ಕೆ.ಜಿ. ತೂಕ ವಿಭಾಗದಲ್ಲಿ ಹರ್ಯಾಣದ ಮನೀಶಾರನ್ನು ಮಣಿಸಿದ ಮೀನಾ ಕುಮಾರಿ(ಆಲ್ ಇಂಡಿಯಾ ಪೊಲೀಸ್) ಚಿನ್ನ ಜಯಿಸಿದರು. ಆರ್‌ಎಸ್‌ಪಿಬಿಯ ರಾಜೇಶ್ ನರ್ವಾಲ್ ಪ್ಲೈವೇಟ್(48ಕೆಜಿ) ವಿಭಾಗದಲ್ಲಿ ಮೋನಿಕ್‌ರನ್ನು(ಉತ್ತರಪ್ರದೇಶ) ಸೋಲಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಸಾಂಪ್ರದಾಯಿಕ ಬಲಿಷ್ಠ ತಂಡ ಹರ್ಯಾಣ ಈ ಬಾರಿ ಕೇವಲ ಒಂದು ಚಿನ್ನ ಜಯಿಸಿದೆ. ಆರ್‌ಎಸ್‌ಪಿಬಿ ಒಟ್ಟು 5 ಚಿನ್ನ ಹಾಗೂ 2 ಕಂಚು ಜಯಿಸಿ ಸಮಗ್ರ ಚಾಂಪಿಯನ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News