ಮಂಗಳೂರು: ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಹತ್ಯೆ

Update: 2018-01-13 17:16 GMT

ಮಂಗಳೂರು, ಜ. 13: ಟಾರ್ಗೆಟ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ರೌಡಿ ಶೀಟರ್ ಇಲ್ಯಾಸ್ (32) ಎಂಬಾತನನ್ನು ನಗರದ ಜಪ್ಪುವಿನ ಕುಡ್ಪಾಡಿಯ ಆತನ ನಿವಾಸಕ್ಕೆ ನುಗ್ಗಿ ಕೊಲೆಗೈದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಕುಡ್ಪಾಡಿಯ ಫ್ಲಾಟ್‌ವೊಂದರಲ್ಲಿ ಇಲ್ಯಾಸ್ ವಾಸವಾಗಿದ್ದ. ಬೆಳಗ್ಗೆ ಸುಮಾರು 9 ಗಂಟೆಯ ಹೊತ್ತಿಗೆ ಅಪರಿಚಿತ ವ್ಯಕ್ತಿಯೋರ್ವ ಬಂದು ಬಾಗಿಲು ತೆರೆಯುವಂತೆ ಹೇಳಿದ್ದಾನೆ. ಇಲ್ಯಾಸ್ ಅವರ ಅತ್ತೆ ಬಾಗಿಲನ್ನು ತೆರೆದಿದ್ದು, ಆತ ಇಲ್ಯಾಸ್ ಎಲ್ಲಿ ಎಂದು ಕೇಳಿದ್ದಾನೆ. ಕೇಳುತ್ತಿದ್ದಂತೆ ನೇರವಾಗಿ ಮನೆಯ ಒಳಗೆ ನುಗ್ಗಿ ಕೊಠಡಿಗೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಇಲ್ಯಾಸ್‌ನನ್ನು ಚೂರಿಯಿಂದ ಎದೆಗೆ ಇರಿದಿದ್ದಾನೆ. ಗಂಭೀರ ಗಾಯಗೊಂಡ ಇಲ್ಯಾಸ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಇಲ್ಯಾಸ್ ಅದಾಗಲೇ ಮೃತಪಟ್ಟಿದ್ದ.

ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಇಬ್ಬರ ಪೈಕಿ ಓರ್ವ ಫ್ಲಾಟ್‌ಗೆ ನುಗ್ಗಿ ಇಲ್ಯಾಸ್‌ನನ್ನು ಕೊಲೆ ಮಾಡಿದ್ದ ಎಂದು ಹೇಳಲಾಗಿದೆ. ಘಟನೆ ನಡೆದ ಸಂದರ್ಭ ಇಲ್ಯಾಸ್‌ನ ಪತ್ನಿ ಆಸ್ಪತ್ರೆಗೆ ತೆರಳಿದ್ದರೆಂದು ಹೇಳಲಾಗಿದೆ. ಈ ಬಗ್ಗೆ ಅತ್ತೆ ಪೋನ್ ಮಾಡಿ ಇಲ್ಯಾಸ್ ಪತ್ನಿಗೆ ವಿಷಯ  ತಿಳಿಸಿದ್ದಾರೆ. ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ದಾವೂದ್ ಹತ್ಯೆ ಯತ್ನ ಪ್ರಕರಣದಲ್ಲಿ ನವೆಂಬರ್ 22ರಂದು ಜೈಲು ಸೇರಿದ್ದ ಈತ ಮೂರು ದಿನಗಳ ಹಿಂದಷ್ಟೇ ಬಿಡುಗಡೆದೊಂಡಿದ್ದ. 2014ರಲ್ಲಿ ಈತನ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ವಿರೋಧಿ ಬಣದ ಕೃತ್ಯ ಶಂಕೆ

ಇಲ್ಯಾಸ್ ಟಾರ್ಗೆಟ್ ಗ್ಯಾಂಗ್‌ನಲ್ಲಿ ಪ್ರಮುಖನಾಗಿ ಗುರುತಿಸಿಕೊಂಡಿದ್ದ. ಇದೇ ಗ್ರೂಪ್ ಎರಡು ಬಣಗಳಾಗಿ ಪ್ರತ್ಯೇಕಿಸಲ್ಪಟ್ಟಿತ್ತು. ಬೇರ್ಪಟ್ಟಿದ್ದ ಒಂದು ಗುಂಪು ಇಲ್ಯಾಸ್‌ನ ವಿರುದ್ಧ ದ್ವೇಷ ಸಾಧಿಸುತ್ತಿತ್ತು. ಪ್ರತ್ಯೇಕಿಸಲ್ಪಟ್ಟ ಬಣದವರೇ ಇಲ್ಯಾಸ್‌ನ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಗರದ ಆಸ್ಪತ್ರೆಯಲ್ಲಿ ಮೃತ ಶರೀರದ ಮರಣೋತ್ತರ ಪರೀಕ್ಷೆಯ ನಡೆಸಲಾಗಿದ್ದು, ಬಳಿಕ ಕುಟುಂಬ ಸದಸ್ಯರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

ಉಳ್ಳಾಲದಲ್ಲಿ ಅಂತ್ಯಕ್ರಿಯೆ

ಮೃತದೇಹವನ್ನು ಉಳ್ಳಾಲಕ್ಕೆ ಕೊಂಡೊಯ್ದು ಉಳ್ಳಾಲ ಸಯ್ಯದ್ ಮದನಿ ಜುಮಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ ಅಂತ್ಯ ಕ್ರಿಯೆಯನ್ನು ನೆರವೇರಿಸಲಾಯಿತು.

ಯುವ ಕಾಂಗ್ರೆಸ್ ಪದಾಧಿಕಾರಿ
ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ ಬೆಂಬಲದೊಂದಿಗೆ ಇಲ್ಯಾಸ್ 2017ರಲ್ಲಿ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ. ಆದರೆ, ಎಐಸಿಸಿ ನಿಯಮಾವಳಿಯಂತೆ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಎರಡನೆ ಸ್ಥಾನ ಗಳಿಸಿದವರು ಉಪಾಧ್ಯಕ್ಷರಾಗುತ್ತಾರೆ. ಅದರಂತೆ ಇಲ್ಯಾಸ್ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದ.

ಮಿಥುನ್ ರೈಯ ಕಟ್ಟಾ ಬೆಂಬಲಿಗನಾಗಿದ್ದ ಇಲ್ಯಾಸ್, ಅವರ ಪ್ರೋತ್ಸಾಹದಿಂದಲೇ ರಾಜಕೀಯ ರಂಗಕ್ಕೆ ಧುಮುಕಿದ್ದ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ, ಹತ್ಯೆಯತ್ನ ಪ್ರಕರಣಗಳಲ್ಲಿ ಇಲ್ಯಾಸ್‌ನ ಹೆಸರು ಕೇಳಿ ಬಂದಿದ್ದರಿಂದ ಆಹಾರ ಸಚಿವ ಯು.ಟಿ.ಖಾದರ್, ‘‘ಇಲ್ಯಾಸ್‌ರನ್ನು ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಲಾಗಿದೆ’’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಆದರೆ ಮಿಥುನ್ ರೈ ಕೂಡ ಸುದ್ದಿಗೋಷ್ಠಿ ನಡೆಸಿ ಸಚಿರ ಹೇಳಿಕೆಯನ್ನು ನಿರಾಕರಿಸಿದ್ದರು. ಇಲ್ಯಾಸ್‌ರ ಮೇಲೆ ಯಾವುದೇ ಆರೋಪ ಸಾಬೀತಾಗದಿರುವು ದರಿಂದ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿಲ್ಲ. ಅವರು ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News