ಇಲ್ಯಾಸ್ ಹತ್ಯೆಯ ಆರೋಪಿಗಳ ಸುಳಿವು ಲಭ್ಯ: ಶೀಘ್ರದಲ್ಲೇ ಬಂಧನ; ಕಮಿಷನರ್

Update: 2018-01-13 13:05 GMT

ಮಂಗಳೂರು, ಜ. 13: ಟಾರ್ಗೆಟ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕುಡ್ಪಾಡಿಯ ಇಲ್ಯಾಸ್ (32) ಹತ್ಯೆಯ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಗುಂಪುಗಳಾಗಿ ವಿಭಾಗಿಸಲ್ಪಟ್ಟ ಟಾರ್ಗೆಟ್ ಗ್ರೂಪ್‌ನ ಒಂದು ಬಣದಿಂದ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಶನಿವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಇಲ್ಯಾಸ್‌ರ ಪತ್ನಿ ಆಸ್ಪತ್ರೆಗೆಂದು ಮನೆಯಿಂದ ಹೊರಗೆ ಬಂದಿದ್ದರು. ಮನೆಯಲ್ಲಿ ಪತ್ನಿಯ ತಾಯಿ, ಇಲ್ಯಾಸ್‌ನ ಸಹೋದರ ಮತ್ತು ಇಲ್ಯಾಸ್‌ನ ಎರಡು ವರ್ಷದ ಮಗು ಮನೆಯಲ್ಲಿದ್ದರು. ಸುಮಾರು 9 ಗಂಟೆಯ ಹೊತ್ತಿಗೆ ಮನೆಗೆ ಬಂದ ಓರ್ವ ಬಾಗಿಲು ತೆರೆಯುವಂತೆ ಹೇಳಿದ್ದಾನೆ. ಈ ಸಂದರ್ಭ ಬಾಗಿಲು ತೆರೆಯಲಾಯಿತು. ಮನೆಯೊಳಗೆ ನುಗ್ಗಿದ ದುಷ್ಕರ್ಮಿ ಇಲ್ಯಾಸ್‌ನ್ನು ಚೂರಿಯಿಂದ ಇರಿದಿದ್ದಾನೆ. ಈ ಬಗ್ಗೆ ಮನೆಯವರು ಇಲ್ಯಾಸ್ ಪತ್ನಿಗೆ ಫೋನ್ ಮಾಡಿ ತಿಳಿಸಿದ್ದು, ಅವರು  ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದರು.

ಇಲ್ಯಾಸ್ ಪತ್ನಿ ನೀಡಿರುವ ದೂರಿನಂತೆ ಹಾಗು ತೋರಿಸಲಾಗಿರುವ ಕೆಲವು ಭಾವಚಿತ್ರಗಳಿಗೆ ಸಂಬಂಧಿಸಿ ಈಗಾಗಲೇ ಆರೋಪಿಗಳ ಬಗ್ಗೆ ಸುಳಿವು ಲಭ್ಯವಾಗಿದೆ. ಇಲ್ಯಾಸ್ ಟಾರ್ಗೆಟ್ ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಈ ಗ್ರೂಪ್‌ ದಾವೂದ್ ಹಾಗೂ ಸಫ್ವಾನ್ ಎಂಬ ಗುಂಪು ಪ್ರತ್ಯೇಕಗೊಂಡು ಈತನ ಮೇಲೆ ದ್ವೇಷ ಸಾಧಿಸುತ್ತಿತ್ತು. ಈ ದ್ವೇಷದಿಂದ ಇಲ್ಯಾಸ್‌ನ ಹತ್ಯೆ ನಡೆದಿದೆ ಎಂದು ಅವರು ವಿವರಿಸಿದರು.

ಇಲ್ಯಾಸ್‌ನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗಷ್ಟೇ ಜೈಲ್ ನಿಂದ ಬಿಡುಗಡೆಗೊಂಡಿದ್ದ ಎಂದವರು ಹೇಳಿದರು. ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ಉದಯ ನಾಯ್ಕಾ, ಪಾಂಡೇಶ್ವರ ಠಾಣಾ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಉಪಸ್ಥಿತರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News