ಹಾಸನ: ಅಪಘಾತಕ್ಕೆ ಬಲಿಯಾದ 8 ಮಂದಿಯಲ್ಲಿ ನಾಲ್ವರು ಬೆಳ್ತಂಗಡಿಯವರು

Update: 2018-01-13 13:13 GMT
ಬಿಜೋ ಜಾರ್ಜ್, ಸೋನಿಯಾ, ಡಯಾನಾ, ರಾಕೇಶ್ ಪ್ರಭು

ಬೆಳ್ತಂಗಡಿ, ಜ. 13: ಹಾಸನ ಸಮೀಪ ಶಾಂತಿಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಅಪಘಾತದಲ್ಲಿ ನೆರಿಯ ಗ್ರಾಮದ ಒಂದೇ ಕುಟುಂಬದ ಮೂವರು ಸೇರಿದಂತೆ ಬೆಳ್ತಂಗಡಿ ತಾಲೂಕಿನ ನಾಲ್ವರು ಮೃತಪಟ್ಟಿದ್ದಾರೆ.

ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪದ ದೇವಗಿರಿಯ ಪುತ್ತೋಟ್ಟು ಪಡವಿಲ್ ಬೇಬಿ ದೇವಸ್ಯ ಎಂಬವರ ಪುತ್ರ ಬಿಜೋ ಜಾರ್ಜ್ (26), ವಿನು ತೋಮಸ್ ಎಂಬವರ ಪತ್ನಿ ಸೋನಿಯಾ (25) ಹಾಗೂ ಪಿ.ಡಿ. ದೇವಸ್ಯ ಎಂಬವರ ಪುತ್ರಿ ಡಯಾನಾ (20) ಮೃತಪಟ್ಟವರು. ಈ ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಇನ್ನೋರ್ವ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಮಂದಿರ ಸಮೀಪದ ನಿವಾಸಿ ರಾಕೇಶ್ ಪ್ರಭು ಮೃತರು ಎಂದು ಗುರುತಿಸಲಾಗಿದೆ.

ಘಟನೆ: ದೇವಗಿರಿ ನಿವಾಸಿಗಳಾದ ಒಂದೇ ಕುಟುಂಬಕ್ಕೆ ಸೇರಿದ ವಿನು ತೋಮಸ್, ಸೋನಿಯಾ, ಬಿಜೋ ಜಾರ್ಜ್, ಡಯಾನಾ ಅವರು ಶನಿವಾರ ಹಾಗೂ ರವಿವಾರ ದೇವಗಿರಿ ಸೈಂಟ್ ಜೂಡು ಚರ್ಚ್‌ನಲ್ಲಿ ನಡೆಯುವ ಸಾಂತ್‌ಮೇರಿ ವಾರ್ಷಿಕ ಹಬ್ಬದಲ್ಲಿ ಭಾಗವಹಿಸಲೆಂದು ಕೆಎಸ್‌ಆರ್‌ಟಿಸಿ ಐರಾವತ ಬಸ್ ನಲ್ಲಿ ಊರಿಗೆ ಹೊರಟಿದ್ದರು. ತಾಯಿ ಹಾಗೂ ಸಹೋದರಿಯನ್ನು ನೋಡಲು ರಾಕೇಶ್ ಅವರು ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಬಸ್ ಹಾಸನದ ಸಮೀಪ ಶಾಂತಿಗ್ರಾಮದ ಬಳಿ ಅಪಘಾತಕ್ಕೀಡಾಗಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ದೇವಗಿರಿಯ ವಿನು ತೋಮಸ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ವಿನು ತೋಮಸ್ ಅವರು ಐರಾವತ ಬಸ್ ನಲ್ಲಿ ಪ್ರಯಾಣಿಸಲು 4 ಟಿಕೇಟನ್ನು ಕಾಯ್ದಿರಿಸಿ, ಪ್ರಯಾಣಿಸಿದ್ದರು. ಮುಂಭಾಗದ ಆಸನಗಳಲ್ಲಿದ್ದವರೇ ಮೃತಪಟ್ಟಿದ್ದಾರೆ. 1,2,3,4 ನಂಬರಿನ ಸೀಟಿನಲ್ಲಿ ಒಂದೇ ಕುಟುಂಬದವರು ಇದ್ದರು. ಸೀಟು 5ರಲ್ಲಿ ರಾಕೇಶ್ ಇದ್ದರು.

ಸ್ಮಶಾನ ಮೌನದಲ್ಲಿ ದೇವಗಿರಿ

ಚರ್ಚ್ ನ ವಾರ್ಷಿಕ ಹಬ್ಬದ ಸಂಭ್ರಮದಲ್ಲಿದ್ದ ದೇವಗಿರಿಯಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ. ದೇವಗಿರಿ ನಿವಾಸಿಗಳಾದ ಬಿಜೋ, ಡಯಾನಾ ಹಾಗೂ ಸೋನಿಯಾ ಅವರ ಮನೆಗಳು ಅಕ್ಕಪಕ್ಕದಲ್ಲಿದೆ. ಸಂಬಂಧಿಕರಾಗಿದ್ದು, ಈ ಮೂರು ಮನೆಗಳಲ್ಲೂ ರೋಧನ ಮುಗಿಲು ಮುಟ್ಟಿದೆ. ಬಿಜೋ ಅವರು ವಿನು ತೋಮಸ್ ಅವರ ಅಣ್ಣನ ಮಗನಾಗಿದ್ದು, ಡಯಾನಾ ಸಂಬಂಧಿಯಾಗಿದ್ದಾರೆ.

ಕನ್ಯಾಡಿಯ ರಾಕೇಶ್ ಅವರ ಮನೆಯಲ್ಲೂ ಇದೇ ವಾತಾವರಣ ಇದೆ. ಈ ದುರ್ಘಟನೆಯ ಸುದ್ದಿ ಕೇಳಿ ತಾಲೂಕಿನ ಜನತೆ ತಲ್ಲಣಗೊಂಡಿದೆ. ಭೀಕರ ಅಪಘಾತವು ತಾಲೂಕಿನ ನಾಲ್ವರನ್ನು ಬಲಿ ತೆಗೆದುಕೊಂಡ ಸುದ್ದಿ ಕುಟುಂಬಗಳಿಗೆ ಬರಸಿಡಿಲಿನಂತೆ ಬಡಿದಿದೆ. ಅಪಘಾತದಲ್ಲಿ ಮೃತಪಟ್ಟ ನಾಲ್ವರ ಕುಟುಂಬಗಳು  ಮಧ್ಯಮ ವರ್ಗದ ಕುಟುಂಬಗಳು. ರಾಕೇಶ್ ಪ್ರಭು ಏಕೈಕ ಪುತ್ರನಾಗಿದ್ದು, ತಾಯಿಯನ್ನು ನೋಡಿಕೊಳ್ಳಬೇಕಾಗಿದ್ದ ಆಧಾರ ಸ್ತಂಭವಾಗಿದ್ದರು.

ಬಿಜೋ ಜಾರ್ಜ್ ಅವರು ಮನೆಯ ಹಿರಿಯ ಮಗನಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗ ಪಡೆದು ಮನೆ ಮಂದಿಯನ್ನು ಸಾಕುವ ಹೊಣೆಗಾರಿಕೆಯನ್ನು ಹೊತ್ತಿದ್ದರು. ಸಹೋದರ ಧರ್ಮಗುರು ಶಿಕ್ಷಣ ಪಡೆಯುತ್ತಿದ್ದಾರೆ. ಸಹೋದರಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆ ಕೃಷಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದ ನೆರಿಯದ ದೇವಗಿರಿಯಿಂದ ಸುಮಾರು 30 ಕಿ.ಮೀ ದೂರದ ಬೆಳ್ತಂಗಡಿಯಲ್ಲಿರುವ ಕಾಲೇಜಿಗೆ ತೆರಳಿ ಪದವಿಗಳಿಸಿದ್ದರು. ಈತ ತನ್ನ ಚಿಕ್ಕಪ್ಪನೊಂದಿಗೆ ಊರಿಗೆ ಹಿಂತಿರುಗುತ್ತಿದ್ದ.

ಪಿ.ಡಿ. ದೇವಸ್ಯ ಅವರ ಡಯಾನಾ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ಪ್ರಸ್ತುತ ಬೆಂಗಳೂರಿನಲ್ಲಿ ಪಾರಾ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದಾರೆ. ದೇವಸ್ಯ ಅವರಿಗೆ ಇಬ್ಬರು ಪುತ್ರಿಯರು. ಈಕೆ ಎರಡನೆಯವಳು. ವಿನು ತೋಮಸ್ ಅವರ ಸಂಬಂಧಿ ಈಕೆ ಹಬ್ಬಕ್ಕೆಂದು ಸಂಬಂಧಿಕರೊಡನೆ ಊರಿಗೆ ಬರುತ್ತಿದ್ದರು.

ಮೂಲತಃ ಸಕಲೇಶಪುರದ ಜೋನಿ ಎಂಬವರ ಪುತ್ರಿ, ದೇವಗಿರಿಯ ವಿನು ತೋಮಸ್ ಅವರ ಪತ್ನಿ ಸೋನಿಯಾ ಕಳೆದ ಎರಡು ವರುಷಗಳ ಹಿಂದೆ ವಿನು ಅವರನ್ನು ವಿವಾಹವಾಗಿದ್ದರು. ವಿನು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಈಕೆಯೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಇವರಿಬ್ಬರೂ ಬೆಂಗಳೂರಿನಿಂದ ಸಂಬಂಧಿಕರ ಜತೆ ಹಬ್ಬಕ್ಕೆಂದು ಊರಿಗೆ ಹೊರಟಿದ್ದರು. ವಿನು ತೋಮಸ್ ಅವರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಕೇಶ್ ಪ್ರಭು

ನಿವೃತ್ತ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಕನ್ಯಾಡಿಯ ದಿ. ರಾಮದಾಸ ಪ್ರಭು ಅವರ ಏಕೈಕ ಪುತ್ರ. ರಾಕೇಶ್ ಅವರು ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ರಾಕೇಶ್ ಅವರೇ ಮನೆಯ ಆಧಾರ ಸ್ತಂಭ. ತಂದೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದು, ಮನೆಯಲ್ಲಿ ತಾಯಿ, ಸಹೋದರಿ ಇದ್ದಾರೆ. ಇತ್ತೀಚಿಗೆ ಹೆರಿಗೆಯಾಗಿರುವ ಸಹೋದರಿ ಹಾಗೂ ಮಗುವನ್ನು ನೋಡಲೆಂದು ಬೆಂಗಳೂರಿನಿಂದ ಊರಿಗೆ ಪ್ರಯಾಣಿಸಿದ್ದರು.

ಅಂತ್ಯ ಸಂಸ್ಕಾರ: ರಾಕೇಶ್ ಪ್ರಭು ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಕನ್ಯಾಡಿಗೆ ತರಲಾಗಿದ್ದು, ಅಂತ್ಯ ಸಂಸ್ಕಾರ ನೆರವೇರಿತು. ದೇವಗಿರಿಯ ಸೋನಿಯಾ, ಡಯಾನ ಹಾಗೂ ಬಿಜೋ ಅವರ ಅಂತ್ಯ ಸಂಸ್ಕಾರ ರವಿವಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News