ಉಡುಪಿ: ಒಂದೇ ರೀತಿಯ ಪರಿಸರ ಜಾಗೃತಿ ಬ್ಯಾಡ್ಜ್ ಧರಿಸಿ ವಿಶ್ವದಾಖಲೆ

Update: 2018-01-13 17:51 GMT

ಉಡುಪಿ, ಜ.13: ಉಡುಪಿ ಸಂವೇದನಾ ಫೌಂಡೇಶನ್ಸ್ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 155ನೆ ಜನ್ಮದಿನದ ಪ್ರಯುಕ್ತ ಮಲ್ಪೆ ಬೀಚ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾದ ವಂದೇ ಮಾತರಂ ಗಾಯನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 23 ಪದವಿ ಕಾಲೇಜುಗಳ ಒಟ್ಟು 4,850 ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸುವ ಒಂದೇ ರೀತಿ ಬ್ಯಾಡ್ಜ್ ಧರಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಒಂದೇ ರೀತಿ ‘ಸೇವ್ ನೇಚರ್ ಫಾರ್ ಪ್ಯೂಚರ್’ ಎಂಬ ಬ್ಯಾಡ್ಜ್ ಧರಿಸುವುದರೊಂದಿಗೆ ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದು, ಇದರ ಮುಖ್ಯ ವ್ಯವಸ್ಥಾಪಕ ಸಂತೋಷ್ ಅಗರ್‌ವಾಲ್ ಕಾರ್ಯಕ್ರಮ ಸಂಯೋಜಿಸಿದ ಉಡುಪಿ ಸಂವೇದನಾ ಫೌಂಡೇಶನ್ಸ್ ತಂಡಕ್ಕೆ ವಿಶ್ವದಾಖಲೆಯ ಪ್ರಮಾಣ ಪತ್ರ  ಹಸ್ತಾಂತರಿಸಿದರು.

 ವೇದಿಕೆಯಲ್ಲಿ ರಾಜ್ಯದ ಖ್ಯಾತ ಗಾಯಕರಾದ ಕೆ.ಸುರೇಖಾ, ರವೀಂದ್ರ ಪ್ರಭು, ಸುರೇಖಾ ಹೆಗಡೆ, ಸುಹಾನ ಸೈಯ್ಯದ್, ಯಶವಂತ್, ಜಗದೀಶ್ ಪುತ್ತೂರು, ವೈಷ್ಣವಿ ಮಣಿಪಾಲ್, ರಾಜೇಶ್ ಶ್ಯಾನುಭಾಗ್, ನಿಖಿಲ್ ತಾವ್ರೊ ಸೇರಿದಂತೆ ಒಟ್ಟು 22 ಮಂದಿ ಗಾಯಕರು 4850 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಿನ್ನೆಲೆ ಸಂಗೀತದೊಂದಿಗೆ ವಂದೇ ಮಾತರಂ ಹಾಡಿದರು.

ಕಾರ್ಯಕ್ರಮವನ್ನು ಉದ್ಯಮಿ ಜಿ.ಶಂಕರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಿದ್ದರು. ಇದೇ ಸಂದರ್ಭ ಪ್ರಸಾದ್ ಪಣಿಕರ್ ಮಡಿಕೇರಿಯಲ್ಲಿರುವ 20 ಎಕರೆ ಜಾಗವನ್ನು ಘೋಷಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡ ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಹಾರ ರೇಡಿಯನ್ಸ್‌ನ ಲಕ್ಷ್ಮೀನಾರಾಯಣ ಗುಪ್ತಾ, ಧವನಮ ಅಮರನಾಥ್, ಕಿಶೋರ್ ಕುಮಾರ್, ಜಯಾನಂದ ಹೋಬಳಿದಾರ್, ಹರಿಯಪ್ಪ ಕೋಟ್ಯಾನ್, ವಸಂತ ಕಾಂತ, ಡಿವೈಎಸ್ಪಿ ಕುಮಾರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಫೌಂಡೇಶನ್‌ನ ಪ್ರಮುಖ ಪ್ರಕಾಶ್ ಮಲ್ಪೆ ಮುಖ್ಯ ಭಾಷಣ ಮಾಡಿದರು. ಪ್ರಶಾಂತ್ ತಿಂಗಳಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ್ ಸ್ವಾಗತಿಸಿದರು. ನಿಖಿಲ್ ಸಾಲ್ಯಾನ್ ವಂದಿಸಿದರು. ಸೌಜನ್ಯ ಹೆಗಡೆ ಹಾಗೂ ದಾವೆದರ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಮಲ್ಪೆ ಶತಾಬ್ದಿ ಮೈದಾನದಿಂದ ಮಲ್ಪೆ ಬಸ್ ನಿಲ್ದಾಣವಾಗಿ ಬೀಚ್‌ವರೆಗೆ ನಡೆದ ಶೋಭಾಯಾತ್ರೆಗೆ ಮಲ್ಪೆ ಉದ್ಯಮಿ ಸಾಧು ಸಾಲ್ಯಾನ್ ಚಾಲನೆ ನೀಡಿದರು. ಇದರಲ್ಲಿ ಆಂಧ್ರ ಪ್ರದೇಶದ ಸಹಾರ ರೇಡಿಯನ್ಸ್ ಸೊಸೈಟಿಯಿಂದ ಪ್ರದರ್ಶಿಸಿದ 1750 ಅಡಿ ಉದ್ದ ಹಾಗೂ 9 ಅಡಿ ಅಗಲದ ತಿರಂಗಾ ಧ್ವಜ ವಿಶೇಷ ಆಕರ್ಷಣೆಯಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News