ಆಟೋ ರಾಜ ಸೇರಿದಂತೆ 7ಮಂದಿ ಸಾಧಕರಿಗೆ 'ಸಂದೇಶ 2018' ಪ್ರಶಸ್ತಿ ಪ್ರದಾನ

Update: 2018-01-13 15:58 GMT

ಮಂಗಳೂರು, ಜ.13: ಅಸಹಿಷ್ಣುತೆ, ದ್ವೇಷ ಭಾವನೆ ತೊರೆದು ಮಾನವೀಯತೆಯೊಂದಿಗೆ ಪ್ರಜಾಪ್ರಭುತ್ವದ ಆಶಯವನ್ನು ಸಕಾರಗೊಳಿಸೋಣ ಎಂದು ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶ ಜಾನ್ ಮೈಕೆಲ್ ಡಿ ಕುನ್ಹಾ ತಿಳಿಸಿದ್ದಾರೆ.

ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2018 ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಜಗತ್ತು ಧರ್ಮ, ಜಾತಿ, ಗಡಿ, ದೇಶ, ಇನ್ನಿತರ ಕಾರಣಗಳಿಂದ ಮಾನವೀಯ ವೌಲ್ಯಗಳ ಕುಸಿತದಿಂದ ಒಡೆದು ಹೋಗಿದೆ, ಮನುಷ್ಯರ ನಡುವೆ ಗೋಡೆಗಳು ನಿರ್ಮಾಣಗೊಂಡಿದೆ. ಈ ನಡುವೆ ಜಗತ್ತಿನ ವಿವಿಧ ಕಡೆ ಮಾನವೀಯ ನೆಲೆಯಲ್ಲಿ ಎಲ್ಲವನ್ನೂ ಮೀರಿ ಸೇವೆ ಸಲ್ಲಿಸುವವರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂದೇಶ ಪ್ರತಿಷ್ಠಾನದ ಸಮಾರಂಭ ಶ್ಲಾಘನೀಯವೆಂದು ಶುಭ ಹಾರೈಸಿದರು. ಪ್ರಜಾಪ್ರಭುತ್ವದಲ್ಲಿ ಪ್ರಜ್ಞಾವಂತ ಜನವರ್ಗ ದಿಂದ ಬದಲಾವಣೆ ಸಾಧ್ಯ ಎಂದು ಡಿಕುನ್ಹಾ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರು ಹಾಗೂ ಸಂದೇಶದ ಪ್ರತಿಷ್ಠಾನದ ಅಧ್ಯಕ್ಷ ಅತೀ.ವಂ.ಹೆನ್ರಿ ಡಿ ಸೋಜ ವಹಿಸಿದ್ದರು. ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ, ಸಂದೇಶ ಪ್ರತಿಷ್ಠಾನದ ಟ್ರಸ್ಟಿಗಳಾದ ರಾಯ್ ಕ್ಯಾಸ್ಟಲಿನೋ,ವಂ.ಐವಾನ್ ಪಿಂಟೋ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ನಾ.ಡಿ ಸೋಜ, ಸಂದೇಶದ ಸಹಾಯಕ ನಿರ್ದೇಶಕ ವಿಕ್ಟರ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

ಸಂದೇಶ ಪ್ರತಿಪ್ಠಾನದ ನಿರ್ದೇಶಕ ವಂ.ವಿಕ್ಟರ್ ವಿಜಯ್ ಲೋಬೊ ಸ್ವಾಗತಿಸಿದರು. ರಾಯ್ ಕ್ಯಾಸ್ಟಿಲಿನೋ ವಂದಿಸಿದರು. ಎಂ.ಆರ್.ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

7 ಮಂದಿ ಸಾಧಕರಿಗೆ ಸಂದೇಶ 2018 ಪ್ರಶಸ್ತಿ ಪ್ರದಾನ :- ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ 2018 ಪ್ರಶಸ್ತಿಯನ್ನು ಗಿರಡ್ಡಿ ಗೋವಿಂದರಾಜು (ಸಾಹಿತ್ಯ), ಎಡ್ವಿನ್ ಮರಿಯಾಣ್ ನೆಟೊ (ಕೊಂಕಣಿ ಸಾಹಿತ್ಯ), ಅಶೋಕ್ ಗುಡಿಗಾರ್ (ಕಲಾ ಕ್ಷೇತ್ರ), ಎನ್.ಗುರುರಾಜ್ ( ಮಾಧ್ಯಮ ), ಕೆ.ಗಾದಿ ಲಿಂಗಪ್ಪ (ಶಿಕ್ಷಣ), ವಿಲ್ಸ್‌ನ್ ಒಲಿವೆರಾ (ಕೊಂಕಣಿ ಸಂಗೀತ), ಸಂದೇಶ  ವಿಶೇಷ ಪ್ರಶಸ್ತಿ ಟಿ.ರಾಜ ಸೇರಿದಂತೆ 7 ಮಂದಿ ಸಾಧಕರಿಗೆ ಸಂದೇಶ 2018  ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅನಾಥ ನಿರ್ಗತಿಕರ ಸೇವಕ ‘ಆಟೋ ರಾಜ’ನಿಗೆ ಸಂದೇಶ ವಿಶೇಷ ಪ್ರಶಸ್ತಿ

ಈ ಬಾರಿಯ ಸಂದೇಶ ವಿಶೇಷ ಪ್ರಶಸ್ತಿಯನ್ನು ಬೆಂಗಳೂರಿನ ಅನಾಥ, ನಿರ್ಗತಿಕರ ಸೇವೆ ಮಾಡುತಿರುವ ಆಟೋ ಚಾಲಕ ವೃತ್ತಿಯ ಆಟೋ ರಾಜ ಖ್ಯಾತಿಯ ಟಿ. ರಾಜ ಅವರಿಗೆ ನೀಡಲಾಯಿತು.

ಮೂರನೆ ಕ್ಲಾಸಿನಲ್ಲಿ ಶಾಲೆಬಿಟ್ಟು, ತಾಯಿಯ ಮಾಂಗಲ್ಯ ಸರ ಕದ್ದು, ದರೋಡೆ ಮಾಡಿ ಜೈಲು ಸೇರಿದವ, ಸಮಾಜದಲ್ಲಿ ರೌಡಿಯಾಗಿ ಎಲ್ಲರಲ್ಲಿಯೂ ಭಯ ಹುಟ್ಟಿಸಿ ಹೆಸರು ಪಡೆಯಬೇಕು ಅಂದು ಕೊಂಡವ, ಜೈಲಿನಲ್ಲಿ ಮನಪರಿವರ್ತನೆಯಾಗಿ ಮದರ್ ಥೆರೆಸಾ ತರಹ ಬದುಕಲು ಆರಂಭಿಸಿದೆ. 10 ಸಾವಿರ ಭಿಕ್ಷುಕರನ್ನು ಅನಾಥರನ್ನು ರಕ್ಷಿಸಿ ಕಳೆದ 20 ವರ್ಷದಿಂದ ಈ ರೀತಿಯ ಸೇವೆ ಮಾಡುತ್ತಿದ್ದೇನೆ. ರಸ್ತೆಯಲ್ಲಿ ಬಿದಿಯಲ್ಲಿ ಬಿದ್ದು ಸಾಯುವವರನ್ನು ಕರೆದು ಅವರ ಕೊನೆ ಆಸೆಯಂತೆ ಈಡೇರಿಸಲು ಪ್ರಯತ್ನಿಸುತ್ತೇನೆ. ಎಲ್ಲೋ ಹುಟ್ಟಿದ ಮದರ್ ಥೆರೆಸಾ ಈ ದೇಶದ ಅನಾಥರಿಗೆ ತಾಯಿಯಾಗಿ ಸೇವೆ ಮಾಡಿದ್ದಾರೆ. ನಾನು ಅವರಂತೆ ಬಡವರ ಸೇವೆ ಸಲ್ಲಿಸುವ ಮೂಲಕ ಬಡವರ ಸೇವೆ ಮಾಡೋಣ ಎಂದು ಟಿ. ರಾಜ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News