‘ವೈದ್ಯಕೀಯ ಶಿಕ್ಷಣ, ಆರೋಗ್ಯ ನೈತಿಕ ಮಾರ್ಗದಲ್ಲಿ ಸಾಗುವಂತಾಗಲಿ’

Update: 2018-01-13 16:11 GMT

ಮಣಿಪಾಲ, ಜ.13: ಪ್ರಸಕ್ತ ಕಾಲದ ಸಂದರ್ಭಕ್ಕನುಗುಣವಾಗಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯವನ್ನು ಅತ್ಯುನ್ನತ ನೈತಿಕ ಹಾಗೂ ಸಿದ್ಧಾಂತದ ಮಾರ್ಗದಲ್ಲಿ ಸಾಗುವಂತೆ ಬೆಸೆಯುವ ಕೆಲಸವಾಗಬೇಕು. ಈ ಮೂಲಕ ವೈದ್ಯಕೀಯ ಶಿಕ್ಷಣವನ್ನು ಜ್ಞಾನದಿಂದ ಕೌಶಲ್ಯಕ್ಕೆ, ಕೌಶಲ್ಯದಿಂದ ವಿವೇಕಕ್ಕೆ ಪರಿವರ್ತಿಸಿ, ಆರೋಗ್ಯದ ಫಲವನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡ ಬೇಕಾಗಿದೆ ಎಂದು ಮಂಗಳೂರಿನ ನಿಟ್ಟೆ ಡೀಮ್ಡ್ ವಿವಿಯ ಪ್ರೊ ಚಾನ್ಸಲರ್ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.

ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನಲ್ಲಿ ಶನಿವಾರ ಸಂಜೆ ನಡೆದ 2018ನೇ ಸಾಲಿನ ಹೊಸ ವರ್ಷದ ಪ್ರಶಸ್ತಿಯನ್ನು ಉಳಿದ ಮೂವರೊಂದಿಗೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯಕೀಯ ವೃತ್ತಿ ಎಂಬುದು ವಿಶೇಷವಾಗಿ ಭಾರತದಲ್ಲಿ ಇಂದು ಕವಲುದಾರಿಯಲ್ಲಿದೆ. ಈ ಎರಡೂ ಕ್ಷೇತ್ರದಲ್ಲಿ ಭಾಗಿ ಯಾಗಿರುವ ನಾವೆಲ್ಲ ಇಂದು ಎಚ್ಚೆತ್ತುಕೊಂಡು ಪ್ರಸಕ್ತ ಕಾಲದ ವಾಸ್ತವಿಕತೆಯನ್ನು ಅರಿತುಕೊಂಡು ಇವೆರಡನ್ನೂ ಸರಿದಾರಿಗೆ ತರಬೇಕಾಗಿದೆ ಎಂದರು.
ಡಾ.ಶಾಂತಾರಾಮ್ ಶೆಟ್ಟಿ ಅವರೊಂದಿಗೆ ಕನ್ನಡದ ಖ್ಯಾತ ಸಾಹಿತಿ, ಲೇಖಕಿ, ಮಕ್ಕಳ ಸಾಹಿತಿ, ನಾಟಕಕಾರ್ತಿ ಜಾನಕಿ ಶ್ರೀನಿವಾಸಮೂರ್ತಿ (ವೈದೇಹಿ), ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಹಾಗೂ ಖ್ಯಾತ ಶಾಸ್ತ್ರೀಯ ಸಂಗೀತಗಾರ ಹಾಗೂ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರಿಗೂ 2018ನೇ ಸಾಲಿನ ಹೊಸ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮಗುವಿನ ಆಹಾರದಂತಿರಲಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈದೇಹಿ, ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ‘ಮಗುವಿನ ಆಹಾರ’ದಂತೆ ಮೃದು ಮತ್ತು ರುಚಿಕರವಾಗಿದ್ದು ಸುಲಭದಲ್ಲಿ ಜೀರ್ಣಗೊಳ್ಳುವಂತಿರಬೇಕು. ಜ್ಞಾನ ಅಥವಾ ಅರಿವು ಎಂಬುದು ಮಗುವಿನ ಮನಸ್ಸಿಗೆ ಸರಾಗವಾಗಿ ಹೋಗಬೇಕು ಎಂದರು.

ಇಂದಿನ ಅಗತ್ಯಕ್ಕನುಗುಣವಾಗಿ ಕನ್ನಡ ಮಾಧ್ಯಮ ಶಾಲೆಗಳು ಉನ್ನತೀಕರಣ ಗೊಳ್ಳಬೇಕು. ಅವುಗಳು ಅತ್ಯಾಧುನಿಕ ಸೌಕರ್ಯ, ಸಲಕರಣೆಗಳನ್ನು ಹೊಂದಿದ್ದು, ಮಗುವಿನ ಹೆತ್ತವರು ತನ್ನ ಮಗುವನ್ನು ಅಲ್ಲಿಗೆ ಸೇರಿಸಲು ಪ್ರೇರೇಪಿಸುವಂತಿರ ಬೇಕು. ಪ್ರಾರಂಭದ ಹಂತದಿಂದ ಇಂಗ್ಲೀಷ್ ಎಂಬುದು ಪಠ್ಯಕ್ರಮದ ಒಂದು ಭಾಗವಾಗಿರಬೇಕೇ ಹೊರತು ಅದು ಮಾಧ್ಯಮವಾಗಿರಬಾರದು. ಪ್ರಾಥಮಿಕ ಶಾಲೆಗಳು ಮತ್ತೊಮ್ಮೆ ವಿದ್ಯಾರ್ಥಿಗಳ ಮೇಲಿನ ಪುಸ್ತಕ ಹಾಗೂ ಪಾಠಗಳ ಹೊರೆಯನ್ನು ಕಡಿಮೆಗೊಳಿಸಿ,ಮಣ್ಣಿನ ಭಾಷೆಯಲ್ಲಿ ಎಲ್ಲವನ್ನೂ ಕಲಿಸುವಂತಾಗ ಬೇಕು ಎಂದವರು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಂಡಿಕೇಟ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮೆಲ್ವಿನ್ ರೇಗೊ, ಡಾ.ಟಿಎಂಎ ಪೈ ಫೌಂಡೇಷನ್‌ನ ಕಾರ್ಯದರ್ಶಿ ಹಾಗೂ ಖಜಾಂಚಿ ಟಿ.ಅಶೋಕ್ ಪೈ, ಮಾಹೆಯ ಪ್ರಥಮ ಪ್ರಜೆ ವಸಂತಿ ಆರ್.ಪೈ ಹಾಗೂ ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಆರ್. ಪೈ ಅವರು ನಾಲ್ವರು ಗಣ್ಯರಿಗೆ ಪ್ರಶಸ್ತಿಗಳನ್ನಿತ್ತು ಗೌರವಿಸಿದರು.

ಅಕಾಡಮಿ ಆಫ್ ಜನರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಎಚ್.ಎಸ್. ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಶಸ್ತಿ ವಿಜೇತರ ಸನ್ಮಾನ ಪತ್ರಗಳನ್ನು ವಾಚಿಸಿದ ಅಕಾಡೆಮಿಯ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಡಾ.ಎಚ್. ಶಾಂತರಾಮ್ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೊದಲು ಕದ್ರಿ ಗೋಪಾಲನಾಥ್‌ರಿಂದ ಸ್ಯಾಕ್ಸೋಫೋನ್ ವಾದನದ ಕಚೇರಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News