ಶಿರ್ವ: ಜಿಲ್ಲಾಮಟ್ಟದ ಕಬ್, ಬುಲ್‌ಬುಲ್ ಉತ್ಸವ ಉದ್ಘಾಟನೆ

Update: 2018-01-13 16:19 GMT

ಶಿರ್ವ, ಜ.13: ಶಿಕ್ಷಣ ಸಂಸ್ಥೆಗಳು ಸ್ಕೌಟ್ಸ್, ಗೈಡ್ಸ್, ಕಬ್ ಮತ್ತು ಬುಲ್‌ಬುಲ್ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ದೇಶ ಪ್ರೇಮ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಉಡುಪಿ ಜಿಲ್ಲಾ ಭಾರತ್ ಸ್ಕೌಟ್ಸ್ ಗೈಡ್ಸ್ ಕಮಿನರ್ ಜ್ಯೋತಿ ಜೆ. ಪೈ ಹೇಳಿದ್ದಾರೆ.

ಶಿರ್ವದ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್‌ನಲ್ಲಿ ಸಂಘಟಿಸಿದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾಪು ಇದರ ಅಧ್ಯಕ್ಷ ಡಾ. ಪ್ರಭಾಕರ ಶೆಟ್ಟಿ ಮಾತನಾಡಿ,ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ವಿಷಯದಲ್ಲಿ ಮಾತ್ರ ಆಸಕ್ತಿ ತೋರಿಸದೆ ಸಂಸ್ಥೆಗಳಲ್ಲಿ ಲಭ್ಯವಿರುವ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಮುಖ್ಯ ಅತಿಥಿ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ ಶೆಟ್ಟಿ ಮಾತನಾಡಿ, ಕಬ್ ಮತ್ತು ಬುಲ್‌ಬುಲ್ ಘಟಕಗಳ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ಸಂದೇಶ ಮತ್ತು ದೇಶವನ್ನು ಕಾಯುತ್ತಿರುವ ಯೋಧರ ಬಗ್ಗೆ ಅರಿವು ಮೂಡಿ ದೇಶ ಪ್ರೇಮ ಮತ್ತು ಸಮಾಜ ಸೇವೆಯ ಭಾವನೆ ಬೆಳೆಯುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.

ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಆಲ್ಬನ್ ರೋಡ್ರಿಗಸ್ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷೆ ಎಡ್ವಿನ್ ಆಳ್ವ, ಕಾರ್ಯದರ್ಶಿ ಜಯಚಂದ್ರ ಮತ್ತು ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ನಂಬಿಯಾರ್ ಶುಭಹಾರೈಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟಕರಾದ ನಿತಿನ್ ಅಮೀನ್ ಮತ್ತು ಸುಮನ ಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕಿ ಭವ್ಯ ಸ್ವಾಗತಿಸಿ ಸಂಧ್ಯಾರಾಣಿ ವಂದಿಸಿದರು. ರೇಷ್ಮ ಕಾರ್ಯಕ್ರಮ ನಿರೂಪಿಸಿದರು.

ಉತ್ಸವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ 440 ಶಿಬಿರಾರ್ಥಿ ಗಳು ಮತ್ತು ಘಟಕದ ಅಧಿಕಾರಿಗಳು ಭಾಗವಹಿಸಿದ್ದರು. ಉದ್ಘಾಟನೆಯ ನಂತರ ಶಿರ್ವ ಪೇಟೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News