ಜ.20: ರಾಜ್ಯ ಸರಕಾರಿ ನೌಕರರ ಉಪವಾಸ ಸತ್ಯಾಗ್ರಹ

Update: 2018-01-13 16:25 GMT

ಉಡುಪಿ, ಜ.13: 2006ರ ಎ.1ರಿಂದ ರಾಜ್ಯ ಸರಕಾರಿ ನೌಕರರಿಗೆ ಜಾರಿಗೊಳಿಸಲಾಗಿರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಯನ್ನು ರದ್ದು ಪಡಿಸುವಂತೆ ಹಾಗೂ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ (ಒಪಿಎಸ್)ನ್ನು ಅನ್ವಯಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ಜ. 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ತಿಳಿಸಿದ್ದಾರೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರ ನಂತರ ಸರಕಾರಿ ಸೇವೆಗೆ ಸೇರುವ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಎನ್‌ಪಿಎಸ್‌ನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ನೌಕರನ ವೇತನದಿಂದ ಶೇ.10ನ್ನು ಕಡಿತಗೊಳಿಸಿ ಅದಕ್ಕೆ ಸರಕಾರ ಕೂಡಾ ಅದಕ್ಕೆ ಸಮಾನವಾದ ಶೇ.10 ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತದೆ ಎಂದರು.

ಹೀಗೆ ಶೇಖರಣೆಯಾದ ಮೊತ್ತವನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಡೆವಲಪ್‌ಮೆಂಟ್ ಅಥಾರಿಟಿ ಮೂಲಕ ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳು ಪಡೆದು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. ಇದರಿಂದ ಬಂದ ಲಾಭದಲ್ಲಿ ಕಂಪೆನಿಗಳು ನೌಕರನ ಸೇವಾನಿವೃತ್ತಿಯ ಬಳಿಕ ಆತನಿಗೆ ಪಿಂಚಣಿ ನೀಡು ತ್ತವೆ ಎಂದವರು ವಿವರಿಸಿದರು.

ಇದರಲ್ಲಿ ನೌಕರರ ಹಣಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಮಾರುಕಟ್ಟೆಯ ಅಂದಿನ ಸ್ಥಿತಿಗನುಗುಣವಾಗಿ ಆತನ ಪಿಂಚಣಿ ನಿರ್ಧಾರವಾಗುತ್ತದೆ. ಇದರಿಂದ ನಿವೃತ್ತ ನೌಕರರಿಗೆ ಕನಿಷ್ಠ ನಿಗದಿತ ಪಿಂಚಣಿ ಸಿಗುವ ಯಾವುದೇ ಭರವಸೆ ಇರುವುದಿಲ್ಲ. ನೌಕರರ ಮರಣಾನಂತರ ಆತನ ಅವಲಂಬಿತ ಕುಟುಂಬಕ್ಕೆ ಯಾವುದೇ ಭದ್ರತೆ ಇರುವುದಿಲ್ಲ ಎಂದು ರಾಘವ ಶೆಟ್ಟಿ ತಿಳಿಸಿದರು.

ಅಲ್ಲದೇ ನೂತನ ಯೋಜನೆಯಿಂದ ಸರಕಾರಿ ನೌಕರರಲ್ಲಿ -ಎನ್‌ಪಿಎಸ್ ಮತ್ತು ಒಪಿಎಸ್- ಎರಡು ಗುಂಪುಗಳು ಸೃಷ್ಟಿಯಾಗಿವೆ. ರಾಜ್ಯದ 1.96 ಲಕ್ಷ ನೌಕರರು (ಜಿಲ್ಲೆಯಲ್ಲಿ 3,200) ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿದ್ದು, ಇವರ ಸಂಧ್ಯಾಕಾಲದ ಬದುಕು ಹಾಗೂ ಇವರ ಅವಲಂಬಿತ ಕುಟುಂಬದ ಬದುಕು ಅತಂತ್ರವಾಗಿದೆ ಎಂದು ಕಳವಳವ್ಯಕ್ತಪಡಿಸಿದರು.

ಇದನ್ನು ವಿರೋಧಿಸಿ, ರಾಜ್ಯ ಸರಕಾರ ಈ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಜ.20ರಂದು ರಾಜ್ಯಾದ್ಯಂತದಿಂದ ಸರಕಾರಿ ನೌಕರರು ಸಂಘಟಿತರಾಗಿ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವರು. ಇದರಲ್ಲಿ ಉಡುಪಿ ಜಿಲ್ಲೆಯಿಂದ 400ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಾಮಚಂದ್ರ ವಾಕುಡ, ಉಡುಪಿ ತಾಲೂಕು ಅಧ್ಯಕ್ಷ ರವಿಕುಮಾರ್, ಕಾರ್ಕಳ ತಾಲೂಕು ಅಧ್ಯಕ್ಷ ಸಂತೋಷ್‌ ಕುಮಾರ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News