ಸಂಘಪರಿವಾರದ ಸುಳ್ಳನ್ನು ಸತ್ಯದ ಮೂಲಕ ಎದುರಿಸಿ: ಜಿ.ರಾಜಶೇಖರ್

Update: 2018-01-13 16:36 GMT

ಉಡುಪಿ, ಜ.13: ಬಿಜೆಪಿ ಹಾಗೂ ಸಂಘಪರಿವಾರ ಮತಾಂತರ, ಲವ್‌ಜಿಹಾದ್, ಭಯೋತ್ಪಾದನೆ ಹೆಸರಿನಲ್ಲಿ ಇಡೀ ಸಮುದಾಯವನ್ನು ದೇಶದ ಶತ್ರುಗಳು ಎಂಬುದಾಗಿ ಬಿಂಬಿಸುತ್ತಿದೆ. ಇವರ ಸುಳ್ಳುಗಳನ್ನು ನಾವು ಸತ್ಯದ ಮೂಲಕ ಎದುರಿಸಬೇಕಾಗಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.

ಬಿಜೆಪಿಯ ಶವ ರಾಜಕೀಯವನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ವಿಚಾರವಾದಿಗಳಿಗೆ ಅವರ ತಂದೆ ಯಾರು ಎಂಬುದು ಗೊತ್ತಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ, ತಾಯಿಯ ಬಗ್ಗೆ ಸಂದೇಹ ವ್ಯಕ್ತ ಪಡಿಸಿದ್ದಾರೆ. ಇದು ಅವರು ಜಗತ್ತಿನ ಎಲ್ಲ ತಾಯಂದಿರಿಗೆ ಮಾಡಿರುವ ಅವಮಾನ. ಅಲ್ಲದೆ ಸ್ವತಃ ಅವರ ತಾಯಿಯನ್ನೇ ಅವಮಾನ ಮಾಡಿದಂತೆ ಎಂದು ಅವರು ಟೀಕಿಸಿದರು.

ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಪಕ್ಷ ಹಾಗೂ ಸಿದ್ಧಾಂತವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಅವರಿಗೆ ಹಿಂದೂ ಯುವತಿ ಸಾವಿನ ಬಗ್ಗೆ ಯಾವುದೇ ವ್ಯಥೆ ಇಲ್ಲ ಎಂದು ಅವರು ಆರೋಪಿಸಿದರು.

ಒಂದು ಧರ್ಮದ ಪರ ವಹಿಸಿ ಮಾತನಾಡುವ ಶೋಭಾ ಕರಂದ್ಲಾಜೆ, ದೇಶದ ಸಂವಿಧಾನಕ್ಕೆ ಅಪಚಾರಕ್ಕೆ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ದ್ರೋಹ ಎಸಗುತ್ತಿದ್ದಾರೆ. ಈ ಮೂಲಕ ಅವರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದು ದರಿಂದ ಮುಂದಿನ ಚುನಾವಣೆಯಲ್ಲ್ಲಿ ಅವರನ್ನು ಅಗತ್ಯವಾಗಿ ಸೋಲಿಸಬೇಕಾಗಿದೆ ಎಂದರು. 

ಎಸ್‌ಡಿಪಿಐ ಹಾಗೂ ಪಿಎಫ್‌ಐ ನಿಷೇಧಿಸಬೇಕೆಂಬ ಬಿಜೆಪಿಯ ಆಗ್ರಹದ ಹಿಂದೆ ರಾಜಕೀಯ ಅಡಗಿದೆ. ಈ ಸಂಘಟನೆಗಳನ್ನು ನಿಷೇಧಿಸುವ ಬದಲು ಸಾಕಷ್ಟು ಕೊಲೆಗಳನ್ನು ಹಾಗೂ ಸಮೂಹ ಹತ್ಯೆಗಳನ್ನು ಮಾಡಿದಕ್ಕೆ ದಾಖಲೆ ಗಳಿರುವ ಬಜರಂಗದಳ, ಶ್ರೀರಾಮ ಸೇವೆ, ವಿಎಚ್‌ಪಿ, ಆರೆಸ್ಸೆಸ್, ಬಿಜೆಪಿಗಳನ್ನು ಮೊದಲು ನಿಷೇಧಕ್ಕೆ ಒಳಪಡಿಸಬೇಕು. ಅಲ್ಪಸಂಖ್ಯಾತರು ಪ್ರಜೆಗಳಾಗಿ ಈ ದೇಶದಲ್ಲಿ ಬದುಕುವುದು ಅವರ ಹಕ್ಕು ಎಂದು ಅವರು ಹೇಳಿದರು. 

ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ ಮಾತ ನಾಡಿ, ಜನ ವಿರೋಧಿ ಬಿಜೆಪಿ ಪಕ್ಷವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಮೂಲೆಗುಂಪು ಮಾಡಲು ಎಲ್ಲ ಶ್ರಮ ವಹಿಸಬೇಕು. ಧರ್ಮ ಆಧಾರಿತ ರಾಜಕೀಯ ಹಾಗೂ ಮಾನವ ಹತ್ಯೆಗೆ ಬೆಂಬಲ ಕೊಡುವುದನ್ನು ನಿಲ್ಲಿಸುವವರಿಗೆ ಬಿಜೆಪಿಯನ್ನು ನಾವು ವಿರೋಧಿಸುತ್ತಲೇ ಇರುತ್ತೇವೆ ಎಂದರು. 

ಈ ಸಂದರ್ಭದಲ್ಲಿ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಪಿಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಎ.ಕೆ., ಮುಸ್ಲಿಮ್ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಆಲಂ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News