ಯಾರಿಗೋ ಕೊಡಬೇಕಾದ ದುಡ್ಡನ್ನು ಇನ್ಯಾರಿಗೋ ಮುಟ್ಟಿಸಿದರು...!

Update: 2018-01-13 16:59 GMT

ಮಂಗಳೂರು, ಜ. 13: ಯಾರಿಗೋ ಕೊಡಬೇಕಾದ ಹಣವನ್ನು ಇನ್ಯಾರಿಗೋ ಮುಟ್ಟಿಸಿದ ಅಪರೂಪದ ಘಟನೆಯೊಂದು ನಗರದ ಹೊಲವಲಯದ ತೊಕ್ಕೊಟ್ಟಿನಲ್ಲಿ ನಡೆದಿದೆ.

ಆಶ್ಚರ್ಯವೆಂದರೆ ಇಲ್ಲಿ ಹಣ ಪಡೆಯುವವನಿಗೂ ಹಣ ತೆಗೆದುಕೊಳ್ಳುವವನಿಗೂ ಯಾವುದೇ ಪರಿಚಯ ಇಲ್ಲ. ಇದರಿಂದಾಗಿಯೇ ಈ ಎಡವಟ್ಟು ಸಂಭವಿಸಿದೆ. ಫಳ್ನೀರ್‌ನ ನಿವಾಸಿ ರಿಯಾಝ್ ಎಂಬವರಿಗೆ ವಿದೇಶದಿಂದ ವ್ಯಕ್ತಿಯೊಬ್ಬರು ಹಣವನ್ನು ಕಳುಹಿಸಿ ರಫೀಕ್ ಕುಂಜತ್ತೂರು ಎಂಬವರಿಗೆ ಮುಟ್ಟಿಸುವಂತೆ ಹೇಳಿದ್ದರು. ಹಾಗೆಯೇ ಹಣ ಕಳುಹಿಸಿದವರು ಹಣ ಯಾರಿಗೇ ಸಂದಾಯವಾಗಬೇಕೋ ಅವರ ಮೊಬೈಲ್ ಸಂಖ್ಯೆಯನ್ನೂ ರಿಯಾಝ್ ಅವರಿಗೆ ಕಳುಹಿಸಿದ್ದರು. ಹಣ ಮುಟ್ಟಿಸುವ ಜವಾಬ್ದಾರಿಯನ್ನು ಪಡೆದಿದ್ದ ರಿಯಾಝ್ ಅವರು ರಫೀಕ್ ಅವರಿಗೆ ಫೋನ್ ಮಾಡಿ ನಿಮ್ಮ ಹಣವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ರಫೀಕ್ ಅವರು ತೊಕ್ಕೊಟ್ಟಿನ ಶ್ರೀ ರತ್ನಂ ಎಂಬ ಹೊಟೇಲ್ ಎದುರು ನಿಂತು ರಿಯಾಝ್ ಅವರ ಬರುವಿಕೆಗಾಗಿ ಕಾದು ಕುಳಿತಿದ್ದರು. ಶ್ರೀ ರತ್ನಂ ಹೊಟೇಲ್ ಎದುರು ಇದ್ದೇನೆಂದೂ ರಿಯಾಝ್‌ಗೆ ತಿಳಿಸಿದ್ದರು.

ರಫೀಕ್‌ನ ಸೂಚನೆಯಂತೆ ರಿಯಾಝ್ ಅವರು ಶ್ರೀ ರತ್ನಂ ಹೊಟೇಲ್ ಎದುರು ಬಂದು ತಲುಪಿದ್ದರು. ಹೊಟೇಲ್ ಎದುರು ನಿಂತಿದ್ದ ಬಿಳಿ ಬಣ್ಣದ ಸ್ವಿಪ್ಟ್ ಕಾರನ್ನು ಗಮನಿಸಿದ ರಿಯಾಝ್, ಫೋನ್ ಮಾಡಿದ ವ್ಯಕ್ತಿ ಇವರೇ ಆಗಿರಬೇಕೆಂದು ಅನುಮಾನಿಸಿ ಅವರ ಕೈಗೆ ಬರೋಬ್ಬರಿ ಒಂದೂವರೆ ಲಕ್ಷ ರೂ.ವನ್ನು ಇಟ್ಟು ಹಿಂದಿರುಗಿದ್ದಾರೆ.10 ನಿಮಿಷದ ಬಳಿಕ ರಫೀಕ್ ಅವರು ರಿಯಾಝ್‌ನನ್ನು ಮತ್ತೆ ಸಂಪರ್ಕಿಸಿ ‘‘ಹಣ ತಲುಪಿಲ್ಲ... ಯಾವಾಗ ಬರುತ್ತೀರಿ’’ ಎಂದು ಹೇಳಿದಾಗ ರಿಯಾಝ್ ಅವರಿಗೆ ಸಹಜವಾಗಿಯೇ ಆಶ್ಚರ್ಯವಾಗಿತ್ತು. ಈಗ ತಾನೇ ನಿಮ್ಮ ಕೈಗೆ ಕೊಟ್ಟು ಬಂದೇನಲ್ಲಾ ಎಂದು ಮರು ಉತ್ತರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಫೀಕ್ ನನ್ನ ಕೈಗೆ ಹಣ ಸಿಕ್ಕಿಲ್ಲ. ನಾನು ನಿಮ್ಮನ್ನೇ ಕಾಯುತ್ತಿದ್ದೇನೆ ಎಂದರು. ಸ್ವಾರಸ್ಯಕರವೆಂದರೆ, ಒಂದೂವರೆ ಲಕ್ಷ ರೂ.ವನ್ನು ಯಾರಿಗೆ ಕೊಟ್ಟಿದ್ದೇನೆ ಎಂಬುದು ರಿಯಾಝ್ ಅವರಿಗೆ ತಿಳಿದಿಲ್ಲ. ಹಾಗೆಯೇ ಹಣ ಪಡೆದವರಿಗೂ ಯಾರು ಕೊಟ್ಟು ಹೋಗಿದ್ದಾರೆಂಬುದೂ ಗೊತ್ತಿಲ್ಲ.

ಈ ಎಲ್ಲಾ ಗೊಂದಲಗಳ ನಡುವೆ ಇದೀಗ ಹಣ ಕಳೆದುಕೊಂಡಿರುವ ರಿಯಾಝ್ ಅವರು ಪತ್ರಿಕೆಯ ಮೊರೆ ಹೋಗಿ ಸಿಕ್ಕಿದವರು ಮರಳಿಸುವಂತೆ ಮನವಿ ಮಾಡಿದ್ದಾರೆ. ರಿಯಾಝ್ ಅವರ ಮೊಬೈಲ್ ಸಂಖ್ಯೆ 9448546679.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News