ಜ.14: ಭಾರತಕ್ಕೆ ಆಸ್ಟ್ರೇಲಿಯ ಸವಾಲು

Update: 2018-01-13 18:28 GMT

ವೆಲ್ಲಿಂಗ್ಟನ್, ಜ.13: ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು ಎದುರಿಸಲಿದೆ.

ರಾಹುಲ್ ದ್ರಾವಿಡ್ ಕೋಚಿಂಗ್‌ನಲ್ಲಿ ಪಳಗಿರುವ ಭಾರತ ತಂಡದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ನ್ಯೂಝಿಲೆಂಡ್‌ನ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಟೂರ್ನಮೆಂಟ್ ಆರಂಭವಾಗಲು ಸಾಕಷ್ಟು ಸಮಯದ ಮೊದಲೇ ಭಾರತ ತಂಡ ಕಿವೀಸ್ ನಾಡಿಗೆ ಆಗಮಿಸಿದೆ. ಮೂರು ಬಾರಿ ಅಂಡರ್-19 ವಿಶ್ವಕಪ್‌ನ್ನು ಜಯಿಸಿರುವ ಭಾರತ 2014ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದೆ.

ಅಂಡರ್-19 ಹಾಗೂ ಭಾರತ ‘ಎ’ ತಂಡದ ಕೋಚ್ ಆಗಿರುವ ದ್ರಾವಿಡ್ ಕೇವಲ ಒಬ್ಬ ಆಟಗಾರನತ್ತ ಗಮನ ನೀಡದೇ ಎಲ್ಲ ಆಟಗಾರರ ಪ್ರದರ್ಶನದ ಮೇಲೆ ನಿಗಾ ಇಡಲು ಬಯಸಿದ್ದಾರೆ. ತಂಡದ ನಾಯಕ ಪೃಥ್ವಿ ಶಾ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಹಿಮಾಂಶು ರಾಣಾ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ.

 ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪಂಜಾಬ್ ಆಟಗಾರ ಶುಭಂ ಗಿಲ್ ರಣಜಿ ಟ್ರೋಫಿಯಲ್ಲಿ ಕೆಲವು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದಾರೆ. ಈ ಮೂಲಕ ಆತ್ಮವಿಶ್ವಾಸ ಹೆಚ್ಚಿ ಸಿಕೊಂಡಿದ್ದಾರೆ.

ಟೂರ್ನಮೆಂಟ್‌ನಲ್ಲಿ ಭಾರತದ ಅವಕಾಶ ಹೆಚ್ಚಲು ಅಗ್ರ ಕ್ರಮಾಂಕದ ಆಟಗಾರರ ಪ್ರದರ್ಶನ ನಿರ್ಣಾಯಕವಾಗುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಅನುಕೂಲ್ ರಾಯ್ ಹಾಗೂ ಅಭಿಷೇಕ್ ಶರ್ಮ ಅವರಿದ್ದಾರೆ. ಈ ಇಬ್ಬರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಬಂಗಾಳದ ವೇಗದ ಬೌಲರ್ ಇಶಾನ್ ಪೊರೆಲ್ ಎಲ್ಲರ ಗಮನ ತನ್ನತ ಸೆಳೆಯುತ್ತಿದ್ದಾರೆ. ಬಂಗಾಳದ ವೇಗಿ ಮುಹಮ್ಮದ್ ಶಮಿ ಈಗಾಗಲೇ ಟೀಮ್‌ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದು, ಪೊರೆಲ್ ತನಗೆ ಲಭಿಸಿರುವ ಸೀಮಿತ ಅವಕಾಶದಲ್ಲಿ ಎಲ್ಲರ ಚಿತ್ತ ಸೆಳೆದಿದ್ದಾರೆ.

  ಪೊರೆಲ್ ಭಾರತದ ವೇಗದ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದು ಅವರಿಗೆ ಶಿವಂ ಮಾವಿ ಸಮರ್ಥ ಸಾಥ್ ನೀಡಲಿದ್ದಾರೆ. ವಲಯ ಮಟ್ಟದ ಚಾಲೆಂಜರ್ಸ್ ಟೂರ್ನಮೆಂಟ್‌ನಲ್ಲಿ 4 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿರುವ ಮಾವಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಮಾವಿಯ ಮಧ್ಯಮ ವೇಗದ ಬೌಲಿಂಗ್ ನೆರವಿನಿಂದ ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್‌ನ್ನು ಅದರದೇ ನೆಲದಲ್ಲಿ ವೈಟ್‌ವಾಶ್ ಮಾಡಿತ್ತು.

‘‘ನಾವು ನ್ಯೂಝಿಲೆಂಡ್‌ಗೆ ಒಂದು ವಾರ ಮುಂಚಿತವಾಗಿಯೇ ಬಂದಿದ್ದೇವೆ. ತಂಡದ ತಯಾರಿ ಚೆನ್ನಾಗಿದೆ. ವಿಶ್ವಕಪ್ ಗೆಲ್ಲುವುದು ನಮ್ಮ ಗುರಿ. ಇದೇ ವೇಳೆ, ನಮ್ಮ ಮೊದಲ ಲೀಗ್ ಪಂದ್ಯದತ್ತ ಗಮನ ನೀಡುವೆವು’’ ಎಂದು ನಾಯಕ ಶಾ ಹೇಳಿದ್ದಾರೆ.

 ವಿಶ್ವಕಪ್‌ನಲ್ಲಿ ಯಾವ ನಿರ್ದಿಷ್ಟ ಆಟಗಾರ ಉತ್ತಮ ಪ್ರದರ್ಶನ ನೀಡಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಕೋಚ್ ದ್ರಾವಿಡ್,‘‘ ನಾವು ಓರ್ವ ಆಟಗಾರನ ಮೇಲೆ ಗಮನ ನೀಡುವುದಿಲ್ಲ. ನಾವು ಸಂಘಟಿತ ಪ್ರದರ್ಶನದ ಮೇಲೆ ನಂಬಿಕೆ ಇಟ್ಟಿದ್ದೇವೆ. ಸಂಘಟಿತವಾಗಿ ಆಡುವ ಅವಕಾಶ ನಮಗೆ ಲಭಿಸಿದೆ’’ ಎಂದರು.

 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಭಾರತ ತಂಡ ವೆಸ್ಟ್‌ಇಂಡೀಸ್‌ಗೆ ಶರಣಾಗಿ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟಿತ್ತು. ಮತ್ತೊಂದೆಡೆ ಆಸ್ಟ್ರೇಲಿಯ ಕ್ರಿಕೆಟ್ ನಾಯಕ, ಭಾರತ ಮೂಲದ ಜೇಸನ್ ಸಂಘ ಭಾರತ ನಾಯಕ ಶಾರಂತೆಯೇ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸೀಸ್ ತಂಡದಲ್ಲಿ ಮಾಜಿ ನಾಯಕ ಸ್ಟೀವ್ ವಾ ಪುತ್ರ ಆಸ್ಟಿನ್, ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಜೇಮ್ಸ್ ಸದರ್‌ಲ್ಯಾಂಡ್ ಪುತ್ರ ವಿಲ್ ಅವರಿದ್ದಾರೆ.

ತಂಡಗಳು

►ಭಾರತ: ಪೃಥ್ವಿ ಶಾ(ನಾಯಕ), ಶುಭಂ ಗಿಲ್, ಆರ್ಯನ್ ಜುಯಲ್, ಅಭಿಷೇಕ್ ಶರ್ಮ, ಅರ್ಷದೀಪ್ ಸಿಂಗ್, ಹಾರ್ವಿಕ್ ದೇಸಾಯಿ, ಮನ್ಜೋತ್ ಕಾರ್ಲ, ಕಮಲೇಶ್ ನಾಗರಕೋಟಿ, ಪಂಕಜ್ ಯಾದವ್, ರಿಯಾನ್ ಪರಾಗ್, ಇಶಾನ್ ಪೊರೆಲ್, ಹಿಮಾಂಶು ರಾಣಾ, ಅನುಕೂಲ್ ರಾಯ್, ಶಿವಂ ಮಾವಿ ಹಾಗೂ ಶಿವ ಸಿಂಗ್.

►ಆಸ್ಟ್ರೇಲಿಯ: ಜೇಸನ್ ಸಂಘ(ನಾಯಕ), ವಿಲ್ ಸದರ್‌ಲ್ಯಾಂಡ್, ಕ್ಸೇವಿಯರ್ ಬಾರ್ಟ್ ಲೆಟ್, ಮ್ಯಾಕ್ಸ್ ಬ್ರಿಯಾಂಟ್, ಜಾಕ್ ಎಡ್ವರ್ಡ್ಸ್,ಝಾಕ್ ಎವನ್ಸ್, ಜಾರಡ್ ಫ್ರೀಮನ್, ರಿಯಾನ್ ಹ್ಯಾಡ್ಲಿ, ಬಾಕ್ಸ್‌ಟರ್ ಹೋಲ್ಟ್, ನಥಾನ್ ಮೆಕ್‌ಸ್ವೀನಿ, ಜೋನಾಥನ್ ಮೆರ್ಲೊ, ಲಾಯ್ಡ್ ಪೋಪ್, ಜೇಸನ್ ರಾಲ್‌ಸ್ಟನ್, ಪರಮ್ ಉಪ್ಪಳ್, ಆಸ್ಟಿನ್ ವಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News