ಶಾಸಕನ ಮನೆಗೆ 50 ಲಕ್ಷ ರೂ. ಅನಧಿಕೃತ ಸಾಗಾಟ: ಬ್ಯಾಂಕ್ ಮ್ಯಾನೇಜರ್ ಬಂಧನ

Update: 2018-01-14 04:09 GMT
ಬ್ಯಾಂಕ್ ಸಿಬ್ಬಂದಿ

ಭುವನೇಶ್ವರ, ಜ. 14: ಒಡಿಶಾ ವಿಧಾನಸಭೆಯ ಪಕ್ಷೇತರ ಶಾಸಕ ಸನಾತನ ಮಹಾಕುದ್ ಮನೆಗೆ ಬ್ಯಾಂಕ್ ವ್ಯವಸ್ಥಾಪಕರ ಕಾರಿನಲ್ಲೇ ಅನಧಿಕೃತವಾಗಿ 50 ಲಕ್ಷ ರೂ. ಸಾಗಿಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಇಂಡುಸ್‌ಇಂಡ್ ಬ್ಯಾಂಕಿನ ಕೊಯೆಂಜಾರ್ ಜಿಲ್ಲೆ ಜೋದಾ ಶಾಖೆಯಿಂದ ರಾಜ್ಯದ ಶ್ರೀಮಂತ ಶಾಸಕನ ಮನೆಗೆ ದಾಖಲೆಗಳಿಲ್ಲದೇ ಭಾರಿ ಮೊತ್ತವನ್ನು ಸಾಗಿಸಲಾಗುತ್ತಿತ್ತು ಎಂದು ಎಸ್ಪಿ ರಾಜೇಶ್ ಪಂಡಿತ್ ಹೇಳಿದ್ದಾರೆ.

"ಬ್ಯಾಂಕ್ ವ್ಯವಸ್ಥಾಪಕ ಮನಸ್ ರಾವುತ್, ಮಾರಾಟ ಅಧಿಕಾರಿ ಸರೋಜ್ ಬೆಹೆರಾ ಮತ್ತು ಗನ್‌ ಮ್ಯಾನ್ ಸನಾತರ ಪ್ರಧಾನ್ ಎಂಬವರನ್ನು ಬಂಧಿಸಲಾಗಿದೆ. ದೊಂಬಿಗೆ ಕುಮ್ಮಕ್ಕು ನೀಡುವ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. ಕಬ್ಬಿಣದ ಅದಿರಿನಿಂದ ಸಮೃದ್ಧವಾಗಿರುವ ಈ ಪ್ರದೇಶದಲ್ಲಿ ಇತ್ತೀಚೆಗೆ ಮಹಾಕುದ್ ಬೆಂಬಲಿಗರು ದೊಂಬಿ ಎಬ್ಬಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಇಂಥ ದೊಂಬಿಯನ್ನು ಮತ್ತಷ್ಟು ನಡೆಸಲು ಬೆಂಬಲಿಗರಿಗೆ ವಿತರಿಸುವ ಸಲುವಾಗಿ ಹಣ ಒಯ್ಯಲಾಗುತ್ತಿತ್ತು. ಇಷ್ಟು ದೊಡ್ಡ ಮೊತ್ತವನ್ನು ಒಯ್ಯುವಾಗ ವ್ಯವಸ್ಥಾಪಕನ ಬಳಿ, ಇದಕ್ಕೆ ಸಂಬಂಧಿಸಿದಂತೆ ಚೆಕ್ ಕೂಡಾ ಇರಲಿಲ್ಲ ಎಂದು ಎಸ್ಪಿ ಹೇಳಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಮಹಾಕುದ್ ಹುಟ್ಟು ಹಾಕಿದ ಸನಾ ಸೇನಾ ಸಂಸ್ಥೆ ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳನ್ನು ನಡೆಸುತ್ತಿದ್ದು, ಶಿಕ್ಷಣ ಸಚಿವ ಬದ್ರಿ ಪಾತ್ರ ಅವರ ಮಗನ ಕಚೇರಿಯನ್ನು ಸುಟ್ಟು ಹಾಕಿದ ಆರೋಪ ಎದುರಿಸುತ್ತಿದೆ. ಮಹಾಕುದ್ 51 ಕೋಟಿ ರೂ. ಆಸ್ತಿ ಘೋಷಿಸಿಕೊಂಡು 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. ಇವರ ಪತ್ನಿ ಶಾಂತಿಲತಾ 18 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ರಾಜಕಾರಣಿಯಾಗುವ ಮುನ್ನ ಇವರು ಟ್ರಕ್ ಚಾಲಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News