ಸುಪ್ರೀಂ ಬಂಡಾಯಕ್ಕೆ ಶಿವಸೇನೆ ಬೆಂಬಲ

Update: 2018-01-14 04:25 GMT
ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹೊಸದಿಲ್ಲಿ, ಜ. 14: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ದಿಢೀರ್ ಬಂಡಾಯ ಘೋಷಿಸಿರುವುದು ರಾಜಕೀಯ ವಲಯದ ಪ್ರತಿಕ್ರಿಯೆಯನ್ನೂ ಸೆಳೆದಿದೆ. ಆಡಳಿತಾರೂಢ ಎನ್‌ಡಿಎ ಮಿತ್ರಪಕ್ಷವಾಗಿರುವ ಶಿವಸೇನೆ ನ್ಯಾಯಮೂರ್ತಿಗಳ ಬಂಡಾಯಕ್ಕೆ ಬೆಂಬಲ ಸೂಚಿಸಿ, ಸರ್ಕಾರ ಹಸ್ತಕ್ಷೇಪ ಮಾಡದಂತೆ ಆಗ್ರಹಿಸಿದೆ. ಈ ಮಧ್ಯೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯಪ್ರವೇಶಿಸಬೇಕು ಎಂದು ಡಿಎಂಕೆ ಒತ್ತಾಯಿಸಿದೆ.

ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ, ರಂಜನ್ ಗೊಗೋಯ್, ಕುರಿಯನ್ ಜೋಸೆಫ್ ಮತ್ತು ಮದನ್ ಬಿ.ಲೋಕೂರ್ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯಶೈಲಿಯನ್ನು ಬಹಿರಂಗವಾಗಿ ಟೀಕಿಸಿದ್ದರಿಂದ ವಿವಾದದ ಕಿಡಿ ಹೊತ್ತಿಕೊಂಡಿತ್ತು.

ಬಂಡೆದ್ದಿರುವ ನಾಲ್ವರು ನ್ಯಾಯಮೂರ್ತಿಗಳಿಗೆ ಬೆಂಬಲ ಸೂಚಿಸಿರುವ ಶಿವಸೇನೆ, "ನ್ಯಾಯಾಂಗವನ್ನು ಮೂಕ ಮತ್ತು ಕಿವುಡು ಮಾಡುವ ಹುನ್ನಾರ ನಡೆದಿದೆ. ರಾಷ್ಟ್ರದ ಬಗೆಗಿನ ಹೊಣೆಗಾರಿಕೆಯನ್ನು ಜನರು ಮಾತ್ರ ನಿರ್ವಹಿಸಿದರೆ ಸಾಕೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಕೇವಲ ಚುನಾವಣೆಗಳನ್ನು ಗೆಲ್ಲುವುದೇ ಆಡಳಿತವಲ್ಲ" ಎಂದು ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ನ್ಯಾಯಮೂರ್ತಿಗಳ ಸುದ್ದಿಗೋಷ್ಠಿಯ ಬಳಿಕ ನ್ಯಾಯಾಂಗದ ಬಗ್ಗೆ ನಂಬಿಕೆ ಉಳಿಸಿಕೊಳ್ಳಬೇಕೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ. ಸರ್ಕಾರ ಈ ವಿವಾದದಲ್ಲಿ ಹಸ್ತಕ್ಷೇಪ ಮಾಡಬಾರದು. ನ್ಯಾಯಾಂಗ ತನ್ನ ಕಾರ್ಯ ಮಾಡಲಿ. ಇಂಥ ಹುಳುಕನ್ನು ಹೊರಹಾಕಿರುವ ನ್ಯಾಯಮೂರ್ತಿಗಳನ್ನು ನಾವು ಬೆಂಬಲಿಸಬೇಕು. ಅವರು ಎತ್ತಿದ ವಿವಾದಗಳ ಬಗ್ಗೆ ತನಿಖೆಯಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಮಧ್ಯೆ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್, "ನ್ಯಾಯಮೂರ್ತಿಗಳು ವಿವಾದ ಬಗೆಹರಿಸಿಕೊಳ್ಳದಿದ್ದರೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯಪ್ರವೇಶಿಸಬೇಕು" ಎಂದು ಒತ್ತಾಯಿಸಿದರು. ಪ್ರಜಾಪ್ರಭುತ್ವದ ಉಳಿವಿಗಾಗಿ ನ್ಯಾಯಮೂರ್ತಿಗಳು ತಮ್ಮ ವಿವಾದವನ್ನು ತಾವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News