ಕನ್ಯತ್ವ ಪರೀಕ್ಷೆ ಸಂಪ್ರದಾಯದ ವಿರುದ್ಧ ಸಹೋದರಿಯರಿಬ್ಬರ ವಾಟ್ಸ್ಆ್ಯಪ್ ಆಂದೋಲನ

Update: 2018-01-14 04:53 GMT

ಮುಂಬೈ, ಜ. 14: ಮಹಾರಾಷ್ಟ್ರದ ಕಂಜರ್‌ಭಟ್ ಸಮುದಾಯದಲ್ಲಿ ಆಚರಣೆಯಲ್ಲಿರುವ ಶತಮಾನಗಳಷ್ಟು ಹಳೆಯ ಕನ್ಯತ್ವ ಪರೀಕ್ಷೆ ಅನಿಷ್ಟದ ವಿರುದ್ಧ ಸಹೋದರಿಯರಿಬ್ಬರು ವಾಟ್ಸ್ಆ್ಯಪ್ ಆಂದೋಲನ ಆರಂಭಿಸಿದ್ದಾರೆ.

ಈ ಅಮಾನವೀಯ ಪದ್ಧತಿ ಹೇಗಿದೆ ಎನ್ನುವುದಕ್ಕೆ ಸ್ಯಾಂಪಲ್ ಇಲ್ಲಿದೆ ನೋಡಿ. ಮಹಾರಾಷ್ಟ್ರದ ಪಿಂಪ್ರಿ ಚಿಂಚವಾಡದ ಹಳ್ಳಿಯೊಂದರಲ್ಲಿ ವಧುವಿನ ತಂದೆ ತಾಯಿ ಮತ್ತು ಜಾತಿ ಪಂಚಾಯತ್ ಮುಖಂಡರು ಕಾಯುತ್ತಿದ್ದರೆ, ಕೆಲ ನಿಮಿಷಗಳ ಬಳಿಕ ಹೊರಬಂದ 40 ವರ್ಷದ ವರ, ಬಿಳಿಯ ಬೆಡ್‌ಶೀಟ್ ಎಸೆದು, "ಇದನ್ನು ನೋಡಿ. ಇದರಲ್ಲಿ ಏನೂ ಇಲ್ಲ. ಆಕೆಯ ಮುಖ ಈಗಲೇ ಕಪ್ಪಿಟ್ಟಿದೆ. ನಾನು ಆಕೆಯನ್ನು ಪತ್ನಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಈಕೆ ಈಗಾಗಲೇ ಕನ್ಯತ್ವ ಕಳೆದುಕೊಂಡಿದ್ದಾಳೆ" ಎಂದು ಗುಡುಗಿದ. ತಕ್ಷಣ ಪಂಚಾಯತ್ ಪ್ರಮುಖರು ಈ ಕನ್ಯೆ ಪರಿಶುದ್ಧಳಲ್ಲ ಎಂದು ಘೋಷಿಸಿದರು.

ಕಳೆದ ಶನಿವಾರ ಇಂಥದ್ದೇ ಘಟನೆ ನಡೆಯಿತು. 15 ವರ್ಷದ ಸವಿತಾ (ಹೆಸರು ಬದಲಿಸಲಾಗಿದೆ) ಕನ್ಯತ್ವ ಪರೀಕ್ಷೆಗೆ ಒಳಪಟ್ಟಳು. ಆಕೆ ಪರಿಶುದ್ಧಳಲ್ಲ ಎಂದು ತಿರ್ಮಾನಿಸಿದ ಹೊರಗೆ ಕಾಯುತ್ತಿದ್ದ ಜಾತಿ ಪಂಚಾಯತ್ ಪ್ರಮುಖರು, ಆಕೆಯನ್ನು ಕಂಬಕ್ಕೆ ಕಟ್ಟಿಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಹೊಡೆದರು. ಆಕೆಯನ್ನು ವಧುವಾಗಿ ಒಪ್ಪಿಕೊಳ್ಳುವಂತೆ ಪೋಷಕರು ಪರಿ ಪರಿಯಾಗಿ ಬೇಡಿದರು. ಆಕೆಯನ್ನು ಕ್ಷಮಿಸಬೇಕು ಹಾಗೂ ವಧುವಿನ ತಂದೆ ತಾಯಿ ವರನಿಗೆ ಇದಕ್ಕೆ ಪರಿಹಾರ ನೀಡಬೇಕು ಎಂಬ ತೀರ್ಪು ಬಂತು.

ಪ್ರತಿ ಹೆಣ್ಣುಮಕ್ಕಳು ವಿವಾಹದ ದಿನ ಈ ಕ್ರೂರ ಪರೀಕ್ಷೆಗೆ ಒಳಗಾಗಲೇ ಬೇಕು. ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೆ, ಬರೆ ಹಾಕುವುದು, ಮುದ್ರೆ ಹಾಕುವುದು, ಬೆತ್ತಲೆಗೊಳಿಸುವುದು, ಕುದಿಯುವ ಎಣ್ಣೆಯಿಂದ ನಾಣ್ಯ ಹೆಕ್ಕಿಸುವುದು ಮುಂತಾದ ಕ್ರೂರ ಶಿಕ್ಷೆ ನೀಡಲಾಗುತ್ತದೆ. ಹದಿಹರೆಯದ ಹೆಣ್ಣುಮಕ್ಕಳು ವಿವಾಹ ಸಂದರ್ಭದಲ್ಲಿ ವಿವಾಹಪೂರ್ವ ಲೈಂಗಿಕ ಸಂಪರ್ಕ ಹೊಂದಿಲ್ಲ ಎನ್ನುವುದನ್ನು ದೃಢಪಡಿಸಲು ಈ ಅಮಾನವೀಯ ಪರೀಕ್ಷೆ ವ್ಯಾಪಕವಾಗಿ ಬಳಕೆಯಲ್ಲಿದೆ.

ಪ್ರಿಯಾಂಕಾ ತಮೈಚೆಕರ್ (26) ಹಾಗೂ ಸಿದ್ಧಾಂತ್ ಇಂದ್ರೇಕರ್ (21) ಈ ಪದ್ಧತಿ ವಿರುದ್ಧ ವಾಟ್ಸ್ಆ್ಯಪ್ ಆಂದೋಲನ ಆರಂಭಿಸಿದ್ದಾರೆ. ಹಲವು ಯುವಕರು ಈ ವಾಟ್ಸ್ಆ್ಯಪ್ ಗುಂಪಿಗೆ ಸೇರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪುಣೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವ ಸಿದ್ಧಾಂತ್, ಇಂಥ ಪರೀಕ್ಷೆಯೊಂದರ ವಿಡಿಯೊ ದೃಶ್ಯಾವಳಿಯನ್ನು ಬಹಿರಂಗಗೊಳಿಸಿ ಪೊಲೀಸರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಪ್ರಿಯಾಂಕ, ಈ ಸಮುದಾಯದ ಕೆಲವೇ ಸುಶಿಕ್ಷಿತ ಮಹಿಳೆಯರಲ್ಲೊಬ್ಬರು. ಈ ಆಂದೋಲನದ ಕಾರಣದಿಂದ ಸಮುದಾಯದಿಂದ ಈಗಾಗಲೇ ಈಕೆ ಬಹಿಷ್ಕಾರಕ್ಕೆ ಒಳಗಾಗಿದ್ದಾಳೆ. ಈಕೆಯ ಸಹೋದರನನ್ನು ಕೂಡಾ ಕ್ರಿಕೆಟ್ ತಂಡದಿಂದ ಹೊರಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News