764 ದಿನಗಳಿಂದ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸುತ್ತಿರುವ ಕೇರಳದ ಯುವಕ

Update: 2018-01-14 06:06 GMT

ತಿರುವನಂತಪುರ, ಜ.14: ಕೇರಳದ ಯುವಕನೊಬ್ಬ ತನ್ನ ಸಹೋದರನ ನಿಗೂಢ ಸಾವಿನ ಹಿನ್ನೆಲೆಯಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಳೆದ 764 ದಿನಗಳಿಂದ ರಾಜ್ಯ ಸಚಿವಾಲಯದ ಮುಂದೆ ಧರಣಿ ನಡೆಸುತ್ತಿದ್ದಾರೆ.
ಶನಿವಾರಕ್ಕೆ 764 ದಿನಗಳನ್ನು ಪೂರ್ಣಗೊಳಿಸಿದ್ದರೂ, ಸಹೋದರನ ಸಾವಿಗೆ ಆತನಿಗೆ ನ್ಯಾಯ ಸಿಕ್ಕಿಲ್ಲ.  30ರ ಹರೆಯದ ಶ್ರೀಜಿತ್ ತನ್ನ ಸಹೋದನ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.
ಮೇ 2014ರಲ್ಲಿ ಶ್ರೀಜಿತ್ ಅವರ ಸಹೋದರ ಶ್ರೀಜೀವ್ ಎಂಬಾತನನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಕೆಲವು ದಿನಗಳ ಬಳಿಕ ಆತ ಮೃತಪಟ್ಟಿರುವುದಾಗಿ ಹೇಳಲಾಗಿತ್ತು.  ಶ್ರೀಜೀವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳುತ್ತಾರೆ.
ಶ್ರೀಜೀವ್ ನ್ನು ಪೊಲೀಸರು ಕೊಂದಿರುವುದಾಗಿ ಶ್ರೀಜಿತ್ ಆರೋಪಿಸಿದ್ದಾರೆ.
“ನನ್ನ ಸಹೋದರನ್ನು  ಸುಳ್ಳು ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಅವನಿಗೆ ಯುವತಿಯೊಂದಿಗೆ ಸ್ನೇಹ  ಇತ್ತು.  ಆ ಯುವತಿ ಪೊಲೀಸ್ ಪೇದೆಯೊಬ್ಬನ ಸಂಬಂಧಿಯಾಗಿದ್ದಳು. ಆತನನ್ನು ಮದುವೆಯ ಮುನ್ನಾ ದಿನವೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿಲ್ಲ. ಅವನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರು’’
“ ಅದೊಂದು ದಿನ ನನ್ನ ಸಹೋದರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ದೂರವಾಣಿ  ಕರೆ ಬಂತು. ಬಳಿಕ ಆತ  ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ಸಹೋದರನ  ಶವ ಕಾಣ ಸಿಕ್ಕಿತು” ಎಂದು ಶ್ರೀಜಿತ್ ಹೇಳುತ್ತಾರೆ.
ಸಹೋದರನ ಮೃತ ದೇಹದ ಮೇಲೆ ಹಲ್ಲೆ ನಡೆಸಿದ ಗುರುತು ಕಂಡು ಬಂದಿತ್ತು. ಪೊಲೀಸರು ನಡೆಸಿದ ದೌರ್ಜನ್ಯದಿಂದಾಗಿ ಆತ ಮೃತಪಟ್ಟಿದ್ದನು. ಆದರೆ ಪೊಲೀಸರು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಟ್ಟು ಕತೆ ಕಟ್ಟಿದ್ದರು ” ಎಂದು ಶ್ರೀಜಿತ್ ಆರೋಪಿಸಿದ್ದಾರೆ.
ಶ್ರೀಜೀವ್  ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ತಾನು ಪ್ರಕರಣದ ತನಿಖೆಯನ್ನು ವಹಿಸಿಕೊಂಡಿಲ್ಲ ಎಂದು ಸಿಬಿಐ ಹೇಳಿದೆ. ಬೀದಿಯಲ್ಲಿ  ಬಿದ್ದು ಪ್ರಾಣ ಕಳೆದುಕೊಂಡರೂ ಸರಿ ತಾನು ನ್ಯಾಯಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯಲಾರೆ ಎಂದು ಶ್ರೀ ಜೀವ್ ಹೇಳಿದ್ದಾರೆ. ಶ್ರೀಜೀವ್ ಹೋರಾಟಕ್ಕೆ ಹಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲೂ ಅವರಿಗೆ ಬೆಂಬಲ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News