ಉತ್ತರ ಪ್ರದೇಶ: ಬಿಜೆಪಿ ಸಂಸದರ- ಶಾಸಕರ ನಡುವೆ ಮಾರಾಮಾರಿ

Update: 2018-01-14 07:30 GMT

ಲಕ್ನೋ, ಜ.14: ಹೊದಿಕೆ ವಿತರಣೆ ವಿಚಾರದಲ್ಲಿ ಬಿಜೆಪಿ ಸಂಸದರು, ಅವರ ಬೆಂಬಲಿಗರು ಮತ್ತು ಬಿಜೆಪಿ ಶಾಸಕ, ಮತ್ತವರ ಬೆಂಬಲಿಗರ ನಡುವೆ ಮಾರಾಮಾರಿ ನಡೆದ ಘಟನೆ  ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ

ಬಿಜೆಪಿ ಸಂಸದೆ ದೇಖಾ ವರ್ಮಾ ಹಾಗೂ ಶಾಸಕ ಶಶಾಂತ್ ತ್ರಿವೇದಿ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡರು. ಸೀತಾಪುರ ಜಿಲ್ಲೆ ಮಹೋಲಿ ಎಂಬಲ್ಲಿ ನಡೆದ ಹೊದಿಕೆ ವಿತರಣೆ ಸಮಾರಂಭ ಈ ಸಂಘರ್ಘಕ್ಕೆ ವೇದಿಕೆಯಾಯಿತು. ಉಭಯ ಮುಖಂಡರ ಬೆಂಬಲಿಗರು ಸಂಘರ್ಷಕ್ಕೆ ಇಳಿದಾಗ, ಸಂಸದೆ ಚಪ್ಪಲಿ ತೆಗೆದು ವಿರೋಧಿ ಗುಂಪಿನತ್ತ ತೋರಿಸುತ್ತಿರುವ ದೃಶ್ಯವೂ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಶ್ರೀಕಾ ಮೋಹನ್, ಎಸ್ಪಿ ಆನಂದ್ ಕುಲಕರ್ಣಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಪರಿಸ್ಥಿತಿ ನಿಯಂತ್ರಿಸಿದರು. ಸಂಸದರು ಹಾಗೂ ಮಹೋಲಿ ನಪಂ ಅಧ್ಯಕ್ಷೆ ಸರಿತಾ ಗುಪ್ತಾ ಅವರು ಹೊದಿಕೆಗಳನ್ನು ವಿತರಿಸಲು ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಶಾಸಕ ತ್ರಿವೇದಿ ಹಾಗೂ ಬೆಂಬಲಿಗರು ಆಗಮಿಸಿ ಅಡ್ಡಿಪಡಿಸಿದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಭಾಂಗಣದ ಒಳಗೆ ಇದ್ದವರಿಗೆ ಹೊದಿಕೆ ವಿತರಿಸುತ್ತಿದ್ದುದನ್ನು ವಿರೋಧಿಸಿದ ಶಾಸಕರ ಬೆಂಬಲಿಗರು, ಸಭಾಗೃಹದ ಹೊರಗೆ ಕಾಯುತ್ತಿರುವವರಿಗೆ ಮೊದಲು ಹೊದಿಕೆ ವಿತರಿಸಿ ಎಂದು ಆಗ್ರಹಿಸಿದರು. ಇದರಿಂದ ಉಭಯ ನಾಯಕರ ಬೆಂಬಲಿಗರಲ್ಲಿ ಮಾತಿನ ಚಕಮಕಿ ಆರಂಭವಾಯಿತು. ಉಭಯ ನಾಯಕರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News