ದಿಲ್ಲಿಯಲ್ಲಿ 1,100 ವಸತಿರಹಿತರು ಶಿಬಿರಗಳಿಗಿಂತ ರಸ್ತೆಗಳನ್ನೇ ನೆಚ್ಚಿಕೊಂಡಿದ್ದಾರೆ: ವರದಿ

Update: 2018-01-14 14:12 GMT

ಹೊಸದಿಲ್ಲಿ, ಜ.14: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಶೀತ ಹವೆಯು ಜನರನ್ನು ಕಂಗಾಲಾಗಿಸಿದೆ. ಈ ಮಧ್ಯೆ ವಸತಿಯಿಲ್ಲದೆ ದಿಲ್ಲಿಯ ರಸ್ತೆಗಳಲ್ಲಿ ಜೀವಿಸುತ್ತಿರುವ 1,100ಕ್ಕೂ ಅಧಿಕ ಜನರನ್ನು ಶಿಬಿರಗಳಲ್ಲಿ ತಂಗುವಂತೆ ಮಾಡಿರುವ ಮನವಿಗಳು ವಿಫಲವಾಗಿವೆ ಎಂದು ವರದಿಗಳು ತಿಳಿಸಿವೆ.

ದಿಲ್ಲಿಯ ರಸ್ತೆಗಳಲ್ಲಿ ದಿನದೂಡುತ್ತಿರುವ 1,167 ಜನರನ್ನು ರಾತ್ರಿಯ ಸಮಯದಲ್ಲಿ ಶಿಬಿರಗಳಲ್ಲಿ ಆಶ್ರಯ ಪಡೆಯುವಂತೆ ಮನವಿ ಮಾಡಲಾಗಿದ್ದರೂ ಅವರು ಇದಕ್ಕೆ ನಿರಾಕರಿಸಿದ್ದಾರೆ ಎಂದು ದಿಲ್ಲಿ ಸರಕಾರ ತಿಳಿಸಿದೆ. ನಗರದಲ್ಲಿ ರಕ್ಷಣಾ ತಂಡವನ್ನು ನಿಯೋಜಿಸುವ ದಿಲ್ಲಿ ನಗರ ವಸತಿ ಅಭಿವೃದ್ಧಿ ಮಂಡಳಿ (ಡಿಯುಎಸ್‌ಐಬಿ) ಯು ಈ ಬಗ್ಗೆ ಸರಕಾರದ ಕಂದಾಯ ಇಲಾಖೆಗೆ ಪತ್ರ ಬರೆದಿದ್ದು ಪರಿಸ್ಥಿತಿಯನ್ನು ವಿವರಿಸಿದೆ ಎಂದು ವರದಿಗಳು ತಿಳಿಸಿವೆ.

ಅನಾರೋಗ್ಯಕರ ವಾತಾವರಣ, ಕಳ್ಳತನದ ಭಯ, ಜಾಗದ ಕೊರತೆ ಮತ್ತು ಜಗಳಗಳು ನಡೆಯುವ ಭಯದಿಂದಾಗಿ ವಸತಿರಹಿತರು ಶಿಬಿರಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಮೇಲೆ ತಿಳಿಸಿದ ಜನರ ಹೊರತಾಗಿ ಕಟ್ಪುತ್ಲಿ ಕಾಲನಿಯ ಜೆಜೆ ಶಿಬಿರದಿಂದ ನಾಪತ್ತೆಯಾಗಿದ್ದ ಮೂವತ್ತು ಕುಟುಂಬಗಳನ್ನು ಪಶ್ಚಿಮ ದಿಲ್ಲಿಯ ಶಾದಿಪುರ ಫ್ಲೈಓವರ್‌ನ ಅಡಿಯಲ್ಲಿ ಪತ್ತೆಹಚ್ಚಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜೆಜೆ ಕಾಲನಿಯನ್ನು ಇತ್ತೀಚೆಗೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ನೆಲಸಮಗೊಳಿಸಿತ್ತು. ಈ ವೇಳೆ ಅಲ್ಲಿದ್ದ ಮೂವತ್ತು ಕುಟುಂಬಗಳು ನಾಪತ್ತೆಯಾಗಿದ್ದವು ಎಂದು ವರದಿ ತಿಳಿಸಿದೆ. ದಿಲ್ಲಿಯ ಕಶ್ಮೆರೆ ಗೇಟ್ ಐಎಸ್‌ಬಿಟಿ, ಕನೌಟ್ ಪ್ಲೇಸ್‌ನ ಹನುಮಾನ್ ಮಂದಿರ ಮತ್ತು ಎಐಐಎಂಎಸ್‌ನಲ್ಲಿ ಬೀದಿಗಳಲ್ಲಿ ನೆಲೆಸಿರುವ ಜನರು ಶಿಬಿರಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ನಿರುಪಯೋಗಿ ಅಧಿಕಾರಿಯನ್ನು ಡಿಯುಎಸ್‌ಐಬಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ವಾಕ್ಸಮರ ನಡೆದಿತ್ತು.

ದಿಲ್ಲಿಯಲ್ಲಿ ಚಳಿಯಿಂದಾಗಿ 44 ಮಂದಿ ವಸತಿರಹಿತರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬ ಎನ್‌ಜಿಒ ಒಂದರ ಹೇಳಿಕೆಯನ್ನು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಡಿಯುಎಸ್‌ಐಬಿ ಮುಖ್ಯಸ್ಥ ಶುರ್ಬಿರ್ ಸಿಂಗ್ ಅವರನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News