ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ

Update: 2018-01-14 14:45 GMT

ಭೋಪಾಲ್, ಜ.14: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ದಿಗ್ವಿಜಯ್ ಸಿಂಗ್ ಅವರ ಸ್ವಕ್ಷೇತ್ರ ರಾಘೋಗಡ್‌ನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಭೆ ನಡೆಸಿದ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಶನಿವಾರದಂದು ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಹದಿಮೂರು ಬಿಜೆಪಿ ಮತ್ತು ಒಂಬತ್ತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ರಾಘೋಗಡ್‌ನ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಸಾರ್ವಜನಿಕ ಸಭೆಯಲ್ಲಿ ಮಾತನಾಡಲು ಮುಖ್ಯಮಂತ್ರಿ ಸಿಂಗ್ ಆಗಮಿಸಿದ್ದರು. ಸಿಂಗ್ ಭಾಷಣ ಮಾಡುತ್ತಿದ್ದಾಗ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಪೌರ ಚುನಾವಣೆಗೆ ದಿನ ನಿಗದಿಯಾದ ಸಂದರ್ಭದಲ್ಲಿ ಅದೂ ಹನ್ನೆರಡು ವರ್ಷಗಳ ನಂತರ ರಾಘೋಗಡ್‌ಗೆ ಮುಖ್ಯಮಂತ್ರಿ ಆಗಮಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಪತ್ರಿಕಾ ವರದಿಗಳು ತಿಳಿಸಿವೆ.

ಶಿವರಾಜ್ ಸಿಂಗ್ ಚೌಹಾಣ್ ಸ್ಥಳದಿಂದ ತೆರಳಿದ ನಂತರ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಟ ಆರಂಭಿಸಿ ಪರಸ್ಪರ ಕಲ್ಲು ತೂರಾಟ ನಡೆಸಿದರು. ಕೂಡಲೇ ಪೊಲೀಸರು ಬಲ ಪ್ರಯೋಗಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡರು. ಸದ್ಯ ಜಿಲ್ಲಾಡಳಿತ ಸಂಘರ್ಷ ನಡೆದ ಪ್ರದೇಶದ ಸುತ್ತ ಸೆಕ್ಷನ್ 144 ಜಾರಿ ಮಾಡಿದೆ ಮತ್ತು ಪೊಲೀಸರು ಎರಡೂ ತಂಡಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸದ್ಯ ನರ್ಮದಾ ಪರಿಕ್ರಮದಲ್ಲಿರುವ ದಿಗ್ವಿಜಯ್ ಸಿಂಗ್, ಜನರಲ್ಲಿ ಶಾಂತಿ ಮತ್ತು ಕಾನೂನು ವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಿಂಗ್ ಅವರ ಪುತ್ರ, ರಾಘೋಗಡ್‌ನ ಕಾಂಗ್ರೆಸ್ ಶಾಸಕ ಜೈವರ್ಧನ್ ಸಿಂಗ್ ಈ ಘಟನೆಗೆ ಚಚೊರದ ಶಾಸಕಿ ಮಮತಾ ಮೀನಾ ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಸಭೆಗೆ ಕಡಿಮೆ ಜನರು ಆಗಮಿಸಿರುವುದು ಬಿಜೆಪಿ ಕಾರ್ಯಕರ್ತರನ್ನು ಹತಾಶೆಗೊಳಿಸಿದೆ ಎಂದವರು ದೂರಿದ್ದಾರೆ.

ಇನ್ನೊಂದೆಡೆ, ಮುಖ್ಯಮಂತ್ರಿಗಳ ಸಭೆಗೆ ತೊಂದರೆ ಉಂಟುಮಾಡುವ ಜೊತೆಗೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೀನಾ ಅವರು ಕಾಂಗ್ರೆಸ್ ಬೆಂಬಲಿಗರನ್ನು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News