×
Ad

ದಿಲ್ಲಿಯ ತೀನ್ ಮೂರ್ತಿ ಚೌಕ್ ಇನ್ನು ಮುಂದೆ ತೀನ್ ಮೂರ್ತಿ ಹೈಫಾ ಚೌಕ್

Update: 2018-01-14 22:05 IST

ಹೊಸದಿಲ್ಲಿ, ಜ.14: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರದಂದು ಹೊಸದಿಲ್ಲಿಯಲ್ಲಿರುವ ತೀನ್ ಮೂರ್ತಿ ಸ್ಮಾರಕದ ಬಳಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ತೆರಳಿ ಗೌರವ ಸಲ್ಲಿಸಿದರು. ಇದೇ ವೇಳೆ ತೀನ್ ಮೂರ್ತಿ ಚೌಕ್ ಅನ್ನು ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಲಾಯಿತು.

ತೀನ್ ಮೂರ್ತಿ ಚೌಕ್‌ನಲ್ಲಿ ಮೂರು ಕಂಚಿನ ಪ್ರತಿಮೆಗಳಿದ್ದು ಇವು 15 ಸಾಮ್ರಾಜ್ಯಶಾಹಿ ಸೇವಾ ಅಶ್ವದಳದ ಭಾಗವಾಗಿದ್ದ ಹೈದರಾಬಾದ್, ಜೋಧ್‌ಪುರ ಮತ್ತು ಮೈಸೂರಿನ ಅಶ್ವಾರೋಹಿಗಳನ್ನು ಪ್ರತಿನಿಧಿಸುತ್ತದೆ. ಈ ಅಶ್ವದಳವು ಪ್ರಥಮ ವಿಶ್ವಯುದ್ಧದ ಸಂದರ್ಭದಲ್ಲಿ ಸೆಪ್ಟೆಂಬರ್ 23ರಂದು ಇಸ್ರೇಲ್‌ನ ಅಬೇಧ್ಯ ನಗರ ಹೈಫಾದ ಮೇಲೆ ದಾಳಿ ನಡೆಸಿ ಅಲ್ಲಿದ್ದ ಶತ್ರುಗಳನ್ನು ಹೊಡೆದೋಡಿಸಿದ್ದರು.

ಆ ಸಮಯದಲ್ಲಿ ಹೈಫಾ ನಗರವು ಒಟ್ಟೊಮನ್‌ಗಳು, ಜರ್ಮನಿ ಮತ್ತು ಆಸ್ಟ್ರಿಯ-ಹಂಗೇರಿಯ ಜಂಟಿ ಸೇನೆಯಿಂದ ಸುತ್ತುವರಿಯಲ್ಪಟ್ಟಿತ್ತು. ಆದರೆ 15 ಸಾಮ್ರಾಜ್ಯಶಾಹಿ ಸೇವಾ ಅಶ್ವದಳವು ಸಾಹಸಿಕವಾಗಿ ಹೋರಾಡಿ ಹೈಫಾ ನಗರಕ್ಕೆ ಮುಕ್ತಿ ದೊರಕಿಸಿದ್ದರು. ಹೈಫಾ ನಗರವನ್ನು ಸ್ವಾತಂತ್ರಗೊಳಿಸಿದ ಪರಿಣಾಮ ಸಮುದ್ರ ಮೂಲಕ ಸಾಗಾಟ ಮಾರ್ಗವು ಸುಗಮಗೊಂಡಿತ್ತು.

ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಹೈಫಾ ನಗರವನ್ನು ಸ್ವತಂತ್ರಗೊಳಿಸುವ ಹೋರಾಟದಲ್ಲಿ 44 ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಬಲಿ ನೀಡಿದ್ದರು. ಇಂದಿಗೂ 61 ಅಶ್ವದಳವು ಸೆಪ್ಟೆಂಬರ್ 23ನ್ನು ಹೈಫಾ ದಿನವಾಗಿ ಆಚರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News