ವಿಮಾನದಂತೆ ಹಾರಿ ಕಟ್ಟಡದ 2ನೆ ಮಹಡಿಗೆ ಗುದ್ದಿದ ಕಾರು!
ಕ್ಯಾಲಿಫೋರ್ನಿಯಾ, ಜ.15: ವಾಹನಗಳು ಮನುಷ್ಯನ ಆಧುನಿಕ ಜೀವನಕ್ಕೆ ಅತ್ಯವಶ್ಯಕವೆನಿಸಿ ಬಿಟ್ಟಿವೆ. ವಾಹನಗಳು ಹೆಚ್ಚಾದಂತೆ ಅಪಘಾತಗಳೂ ಹೆಚ್ಚೆಚ್ಚು ನಡೆಯುತ್ತಲೇ ಇವೆ. ಸಾಮಾನ್ಯವಾಗಿ ರಸ್ತೆ ಅಪಘಾತಗಳು ದಿನನಿತ್ಯ ಸುದ್ದಿಯಾಗುತ್ತದೆ. ಆದರೆ ಇಲ್ಲೊಂದು ಕಾರು ಅಪಘಾತಕ್ಕೀಡಾಗಿದೆ. ಆದರೆ ಇದು ರಸ್ತೆಯಲ್ಲೋ , ನೆಲದ ಮೇಲೋ ಅಲ್ಲ ಬದಲಾಗಿ ನೆಲಕ್ಕಿಂತ ಮೇಲೆ!.
ಹೌದು ಈ ಅಪಘಾತ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ. ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ವಿಭಜಕ (ಡಿವೈಡರ್) ಗೆ ಢಿಕ್ಕಿ ಹೊಡೆದಿತ್ತು, ಅಪಘಾತದ ರಭಸಕ್ಕೆ ಕಾರು ಕಟ್ಟಡವೊಂದರ 2 ನೆ ಮಹಡಿಯತ್ತ ನುಗ್ಗಿ 2ನೆ ಮಹಡಿಯಲ್ಲಿದ್ದ ಕೋಣೆಯನ್ನು ಸೀಳಿಕೊಂಡು ಅರ್ಧದಲ್ಲಿ ನಿಂತಿದೆ.
ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಈ ಅಪಘಾತದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪಘಾತದ ಸಂದರ್ಭ ಕಾರು ಅತೀ ವೇಗದಿಂದ ಚಲಿಸುತ್ತಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.