37 ಸಾವಿರ ರೂ. ಭಗವದ್ಗೀತೆಯ ಮೌಲ್ಯಕ್ಕಿಂತ ಹೆಚ್ಚೇನಲ್ಲ: ಖಟ್ಟರ್

Update: 2018-01-15 15:34 GMT

 ಚಂಡೀಗಡ, ಜ.15: ಕಳೆದ ನವೆಂಬರ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ಸಂದರ್ಭ ಭಗವದ್ಗೀತೆಯ ಪ್ರತಿಗಳನ್ನು ಖರೀದಿಸುವ ಮೂಲಕ ಸರಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ನಿರಾಕರಿಸಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್, ಈ ಪವಿತ್ರ ಕೃತಿಗಾಗಿ ಮಾಡಿರುವ ವೆಚ್ಚವು ಅದರ ಮೌಲ್ಯದ ಎದುರು ಹೆಚ್ಚೇನಲ್ಲ ಎಂದು ಹೇಳಿದ್ದಾರೆ.

 ಭಗವದ್ಗೀತೆಯ 10 ಪ್ರತಿಗಳನ್ನು ಪ್ರತಿಷ್ಠಿತ ಸಂಸ್ಥೆಯೊಂದರಿಂದ 37,900 ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. ಇದು ಹಣವನ್ನು ಪೋಲು ಮಾಡಿದಂತೆ ಎನ್ನುವವರು ಭಗವದ್ಗೀತೆಯ ಮೌಲ್ಯ ಅಥವಾ ಅರ್ಥ ತಿಳಿಯದವರಾಗಿದ್ದಾರೆ ಎಂದು ಖಟ್ಟರ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು. ಇದಕ್ಕೂ ಮುನ್ನ ಮಧುಬನ್‌ನಲ್ಲಿರುವ ಹರ್ಯಾಣ ಪೊಲೀಸ್ ಅಕಾಡಮಿಯಲ್ಲಿ ನೂತನವಾಗಿ ನೇಮಕವಾದ ಪೊಲೀಸ್ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ್ದ ಖಟ್ಟರ್, ಮುಖ್ಯಮಂತ್ರಿಗಳು ಪೊಲೀಸ್ ಅಕಾಡಮಿಗೆ ಭೇಟಿ ನೀಡಲು ಹಿಂಜರಿಯುತ್ತಾರೆ ಎಂಬ ಕಲ್ಪನೆಯನ್ನು ಸುಳ್ಳಾಗಿಸಿದ್ದೇನೆ . ಕಳೆದ 17 ವರ್ಷಗಳಿಂದ ಪೊಲೀಸ್ ಅಕಾಡಮಿಗೆ ಯಾವ ಮುಖ್ಯಮಂತ್ರಿಯೂ ಭೇಟಿ ನೀಡಿರಲಿಲ್ಲ ಎಂದರು.

  ಹರ್ಯಾಣ ಪೊಲೀಸರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸವಲತ್ತುಗಳನ್ನು ಒದಗಿಸಲಾಗಿದೆ. ಚಳಿಗಾಲದ ಜಾಕೆಟ್ ಖರೀದಿಗಾಗಿ ಎಲ್ಲಾ ಸಿಬ್ಬಂದಿಗಳೂ ತಲಾ 1,500 ರೂ. ಒದಗಿಸಲಾಗಿದೆ. ಪೊಲೀಸರಿಗೆ ವಾರಕ್ಕೊಂದು ರಜೆ ತೆಗೆಯುವ ಸೌಲಭ್ಯ ನೀಡಲಾಗಿದೆ ಎಂದು ಖಟ್ಟರ್ ಹೇಳಿದರು. ರಾಜ್ಯದಲ್ಲಿ ಪದ್ಮಾವತಿ ಸಿನೆಮ ಪ್ರದರ್ಶನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸೆನ್ಸಾರ್ ಮಂಡಳಿ ಸಿನೆಮಾದ ಹೆಸರು ಬದಲಿಸಿ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಸಿನೆಮ ಪ್ರದರ್ಶನಕ್ಕೂ ಮುನ್ನ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News