ಕೇಂದ್ರ ಸಚಿವ ಅಠಾವಳೆ ಭಾಷಣಕ್ಕೆ ದಲಿತ ಸಂಘಟನೆ ಅಡ್ಡಿ

Update: 2018-01-15 15:20 GMT

ಔರಂಗಾಬಾದ್, ಜ.15: ಮರಾಠವಾಡ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ಸಹಾಯಕ ಸಚಿವ ರಾಮದಾಸ್ ಅಠಾವಳೆಯವರ ಭಾಷಣದ ಸಂದರ್ಭ ದಲಿತ ಕಾರ್ಯಕರ್ತರ ತಂಡವೊಂದು ಪ್ರತಿಭಟನೆ ನಡೆಸಿ ಘಟನೆ ನಡೆದಿದೆ. ಮರಾಠ ವಿವಿಯ ಹೆಸರು ವಿಸ್ತರಿಸಿದ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 1990ರಲ್ಲಿ ದಲಿತರ ತೀವ್ರ ಪ್ರತಿಭಟನೆಯ ಬಳಿಕ ರಾಜ್ಯ ಸರಕಾರವು ವಿವಿಯ ಹೆಸರನ್ನು ಡಾ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ ಎಂದು ವಿಸ್ತರಿಸಿತ್ತು. ಈ ದಿನಾಚರಣೆಯನ್ನು ಔರಂಗಾಬಾದ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು ಇತ್ತೀಚೆಗೆ ಕೋರೆಗಾಂವ್‌ನಲ್ಲಿ ದಲಿತರ ಸಂಘಟನೆ ಕಾರ್ಯಕ್ರಮದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ, ದಿನಾಚರಣೆಯನ್ನು ಒಂದೇ ವೇದಿಕೆಯಡಿ ಆಯೋಜಿಸಲು ದಲಿತರ ಸಂಘಟನೆ ನಿರ್ಧರಿಸಿತ್ತು.

  ಆದರೆ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ದ ಅಠಾವಳೆ ನೇತೃತ್ವದ ಬಣವು ಈ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ಸಿದ್ಧಪಡಿಸಿತ್ತು. ಇದನ್ನು ಇನ್ನೊಂದು ಸಂಘಟನೆ ಆಕ್ಷೇಪಿಸಿ ಪ್ರತಿಭಟನೆ ನಡೆಸಿದೆ. ಅಲ್ಲದೆ ಅಠಾವಳೆ ಭಾಷಣಕ್ಕೆ ಅಡ್ಡಿಪಡಿಸಿ ಕುರ್ಚಿಗಳನ್ನು ವೇದಿಕೆಗೆ ಎಸೆದು ಅವರ ವಿರುದ್ಧ ಘೋಷಣೆ ಕೂಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಅಠಾವಳೆಯವರ ಬೆಂಬಲಿಗರು ಅವರ ಸುತ್ತ ಮಾನವಸರಪಳಿ ನಿರ್ಮಿಸಿ ಭಾಷಣ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 130 ಪ್ರತಿಭಟನಾಕಾರರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News