ಆಫ್ರಿಕದ ಬ್ಯಾಟಿಂಗ್‌ಗೆ ಮಳೆ -ಮಂದ ಬೆಳಕು ಅಡ್ಡಿ
ಸೆಂಚೂರಿಯನ್ , ಜ.15: ಇಪ್ಪತ್ತೆಂಟು ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕ ತಂಡದ ಬ್ಯಾಟಿಂಗ್‌ಗೆ ಮಳೆ ಹಾಗೂ ಮಂದಬೆಳಕು ಅಡ್ಡಿಪಡಿಸಿದೆ.
ಸೂಪರ್‌ಸ್ಪೋರ್ಟ್ಸ್‌ಪಾರ್ಕ್‌ನಲ್ಲಿ ಮಂದ ಬೆಳಕಿನಿಂದಾಗಿ ಆಟ ನಿಂತಾಗ ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್‌ನಲ್ಲಿ 29 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 90 ರನ್ ಗಳಿಸಿತ್ತು. ಒಟ್ಟು 118 ರನ್ ಮುನ್ನಡೆಯಲ್ಲಿದೆ. 50 ರನ್ ಗಳಿಸಿರುವ ಎಬಿ ಡಿವಿಲಿಯರ್ಸ್ ಮತ್ತು 36 ರನ್ ಗಳಿಸಿರುವ ಡೀನ್ ಎಲ್ಗರ್ ಔಟಾಗದೆ ಕ್ರೀಸ್‌ನಲ್ಲಿದ್ದರು. ಡೀನ್ ಎಲ್ಗರ್ ಜೊತೆ ಇನಿಂಗ್ಸ್ ಆರಂಭಿಸಿದ ಏಡೆನ್ ಮರ್ಕರಮ್ ಅವರನ್ನು 2ನೇ ಓವರ್‌ನ ಎರಡನೇ ಎಸೆತದಲ್ಲಿ ಜಸ್‌ಪ್ರೀತ್ ಬುಮ್ರಾ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಆಗ ತಂಡದ ಸ್ಕೋರ್ 1 ಆಗಿತ್ತು. ತಂಡದ ಸ್ಕೋರ್ 3ಕ್ಕೆ ತಲುಪುವಾಗ ಆಫ್ರಿಕ ತಂಡಕ್ಕೆ ಇನ್ನೊಂದು ಆಘಾತವಾಯಿತು. ಹಾಶೀಮ್ ಅಮ್ಲರನ್ನು ಬುಮ್ರಾ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 5.3 ಓವರ್‌ಗಳಲ್ಲಿ 3 ರನ್‌ಗೆ 2 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕ ತಂಡವನ್ನು ಎಲ್ಗರ್ ಮತ್ತು ಡಿವಿಲಿಯರ್ಸ್ ಆಧರಿಸಿ ಮುರಿಯದ ಜೊತೆಯಾಟದಲ್ಲಿ 87 ರನ್‌ಗಳ ಜೊತೆಯಾಟ ನೀಡಿದರು. ದಕ್ಷಿಣ ಆಫ್ರಿಕ 23.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 68 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡಿತು. ಬಳಿಕ ಮತ್ತೆ ಆಟ ಆರಂಭಗೊಂಡರೂ ಹೆಚ್ಚು ಹೊತ್ತು ಆಟ ನಡೆಯಲಿಲ್ಲ. ಮಂದ ಬೆಳಕಿನಿಂದ ಆಟ ಸ್ಥಗಿತ ಗೊಂಡಿತು.