21ರಂದು ಪುತ್ತೂರಿನಲ್ಲಿ ಕ್ಯಾಂಪ್ಕೋದ ಸೌಲಭ್ಯ ಸೌಧ ಉದ್ಘಾಟನೆ

Update: 2018-01-16 14:05 GMT

ಮಂಗಳೂರು, ಜ.16: ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎಮಿನಿಟಿ ಕಟ್ಟಡ (ಸೌಲಭ್ಯ ಸೌಧ) ಜ.21ರಂದು ಉದ್ಘಾಟನೆಗೊಳ್ಳಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.

ಮಂಗಳೂರಿನ ಕ್ಯಾಂಪ್ಕೋ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಬೆಳಗ್ಗೆ 10 ಗಂಟೆಗೆ ನೂತನ ಕಟ್ಟಡವನ್ನು ಉದ್ಘಾಟಿಸುವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಶಿ ಸುಬ್ರಾಯ ಭಟ್ಟರ ಪ್ರತಿಮೆಯನ್ನು ಕೇಂದ್ರದ ಅಂಕಿ ಅಂಶಗಳು ಹಾಗೂ ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅನಾವರಣಗೊಳಿಸುವರು. ಇದೇ ವೇಳೆ ಮೌಲ್ಯಯುತ ಚಾಕಲೇಟ್ ಉತ್ಪನ್ನಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಮಾರುಕಟ್ಟೆಗೆ ಬಿಡುಗಡೆಗೊಳಿಸುವರು. ಇದೇ ವೇಳೆ ಪುತ್ತೂರಿನ ಕಾವು ಎಂಬಲ್ಲಿ ಅಡಿಕೆ, ಕಾಳುಮೆಣಸು ಹಾಗೂ ರಬ್ಬರ್ ಶೇಖರಣೆಗಾಗಿ ನಿರ್ಮಾಣಗೊಳ್ಳಲಿರುವ ಗೋದಾಮಿಗೆ ಸಂಸದ ನಳಿನ್ ಕುಮಾರ್ ಶಂಕುಸ್ಥಾಪನೆ ನೆರವೇರಿಲಿದ್ದಾರೆ ಎಂದು ಅವರು ಹೇಳಿದರು.

1983ರ ಸೆಪ್ಟಂಬರ್ 1ರಂದು ಉದ್ಘಾಟನೆಗೊಂಡ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಇಂದು ವಾರ್ಷಿಕ 23,000 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಕಾರ್ಖಾನೆಯಲ್ಲಿ 800 ಮಂದಿ ಉದ್ಯೋಗಿಗಳಿದ್ದಾರೆ ಎಂದು ಅವರು ಹೇಳಿದರು.

ಸುಸಜ್ಜಿತ ಸುವ್ಯಸ್ಥಿತ ಸೌಲಭ್ಯ ಸೌಧ
ನಾಲ್ಕು ಅಂತಸ್ತುಗಳನ್ನು ಹೊಂದಿರುವ 42,000 ಚದರ ಅಡಿ ವಿಸ್ತೀರ್ಣವುಳ್ಳ ಸೌದ ನೆಲ ಅಂತಸ್ತಿನಲ್ಲಿ ಆಡಳಿತಾತ್ಮಕ ಕಚೇರಿಗಳು, ಪ್ರಥಮ ಅಂತಸ್ತಿನಲ್ಲಿ ಕೈಗಾರಿಕಾ ಉಪಹಾರ ಗೃಹ, ಆಧುನಿಕ ಸೌಲಭ್ಯವುಳ್ಳ ಪಾಕಶಾಲೆ, ಹವಾನಿಯಂತ್ರಿತ ಡೈನಿಂಗ್ ಹಾಲ್, ಕಾರ್ಮಿಕರಿಗಾಗಿ 1050 ಲಾಕರ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಅಂತಸ್ತಿನ ಪ್ರಾಜೆಕ್ಟ್ ಹಾಲಿನಲ್ಲಿ 50, ಹವಾನಿಯಂತ್ರಿತ ಡೈನಿಂಗ್ ಹಾಲ್‌ನಲ್ಲಿ 50 ಹಾಗೂ ಕೈಗಾರಿಕಾ ಉಪಹಾರ ಗೃಹದಲ್ಲಿ 150 ಆಸನಗಳ ವ್ಯವಸ್ಥೆಯಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ಎರಡನೆ ಅಂತಸ್ತಿನಲ್ಲಿ ಚಾಕಲೇಟ್ ಉತ್ಪನ್ನಗಳ ಪ್ಯಾಕಿಂಗ್ ಕೆಲಸಗಳು ನಡೆಯುತ್ತವೆ. ಈ ಅಂತಸ್ತಿನಲ್ಲಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹ ಪ್ಯಾಕರ್‌ಗಳಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ.

ಮೂರನೆ ಅಂತಸ್ತಿನಲ್ಲಿ 60 ಆಸನಗಳ ಸುವ್ಯವಸ್ಥಿತ ಬೋರ್ಡ್ ಮೀಟಿಂಗ್ ಹಾಲ್ ಹಾಗೂ ಚಾಕಲೇಟ್ ಉತ್ಪನ್ನಗಳ ಪ್ಯಾಕಿಂಗ್ ಸಂಬಂಧಿಸಿದ ಎಲ್ಲಾ ಪರಿಕರಗಳನ್ನು ಈ ಅಂತಸ್ತಿನಲ್ಲಿ ಲಭ್ಯವಿರಿಸಲು ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ತಳ ಭಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಉಪಸ್ಥಿತರಿದ್ದರು.

ಕಟ್ಟಡದಲ್ಲಿದೆ ಮಳೆ ಕೊಯಿಲು ವ್ಯವಸ್ಥೆ!
ಪುತ್ತೂರಿನ ಚಾಕಲೇಟ್ ಕಾರ್ಖಾನೆಯ ಆವರಣದ ನೂತನ ಸುಸಜ್ಜಿತ ಸೌಲಭ್ಯ ಸೌಧದಲ್ಲಿ ಅಂತರ್ಜಲ ಸಂರಕ್ಷಣೆಗೆ ಮಳೆ ನೀರು ಕೊಯಿಲಿನ ವೈಜ್ಞಾನಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಪೂರ್ಣ ಕಟ್ಟಡವು ಅಗ್ನಿ ದುರಂತ ನಿರೋಧ ವ್ಯವಸ್ಥೆಯನ್ನು ಹೊಂದಿದ್ದು, ಇದಕ್ಕಾಗಿ ಪ್ರತ್ಯೇಕ ನೀರಿನ ಶೇಖರಣಾ ವ್ಯವಸ್ಥೆ ಮಾಡಲಾಗಿದೆ. ಆಹಾರ ಭದ್ರತಾ ತತ್ವದನುಸಾರ ಸೂಕ್ತ ಕ್ರವುಗಳನ್ನು ಕೈಗೊಳ್ಳಲಾಗಿದ್ದು,
ಇಲ್ಲಿ ನಿಯಮಿತವಾಗಿ ತರಬೇತಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ವಿವರ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News