×
Ad

ಕಾಂಗ್ರೆಸ್ ನಾಯಕನಿಂದ ಕೊಲೆ ಬೆದರಿಕೆ; ವಿಧವೆಯ ಆರೋಪ

Update: 2018-01-16 20:04 IST

ಹೊಸದಿಲ್ಲಿ, ಜ.16: ಕಾಂಗ್ರೆಸ್ ನಾಯಕರೊಬ್ಬರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು 1984ರ ಸಿಖ್ ದಂಗೆಗಳ ಸಂತ್ರಸ್ತೆ ವಿಧವೆ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್, ತನ್ನ ವಿರುದ್ಧ ಸಾಕ್ಷಿ ನುಡಿದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇಂದಿರಾ ಗಾಂಧಿಯವರ ಹತ್ಯೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಸಿಖ್ಖರ ವಿರುದ್ಧ ದಂಗೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೊಪ ಸಜ್ಜನ್ ಕುಮಾರ್ ಮೇಲಿದೆ.

ಪಟಿಯಾಲಾ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ನೀಡಿದ ಶೀಲಾ ಕೌರ್, ಕೊಲೆ ಬೆದರಿಕೆ ಇದ್ದ ಕಾರಣದಿಂದ ನಾನು ಈ ಹಿಂದೆ ಸಜ್ಜನ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ ಎಂದು ಹೇಳುವ ಮೂಲಕ ಕುಮಾರ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಖಚಿತಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶೀಲಾ ಕೌರ್ ಮೃತ ಸುರ್ಜೀತ್ ಕೌರ್ ಅವರ ಪತ್ನಿಯಾಗಿದ್ದಾರೆ.

ಮಂಗಳವಾರದಂದು ನಡೆದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಸುತ್ತ ಸಿಆರ್‌ಪಿಎಫ್ ತಂಡದಿಂದ ಭದ್ರತೆಯನ್ನು ಏರ್ಪಡಿಸಲಾಗಿತ್ತು ಮತ್ತು ಈ ವೇಳೆ ಮಾಧ್ಯಮಗಳಿಗೂ ಪ್ರವೇಶ ನಿರಾಕರಿಸಲಾಗಿತ್ತು. ಸಂಪೂರ್ಣ ವಿಚಾರಣೆಯನ್ನು ಚಿತ್ರೀಕರಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ಇನ್ನೊಂದು ಪ್ರಕರಣದ ವಿಚಾರಣೆಯ ವೇಳೆ ಶೀಲಾ ಕೌರ್, ಸಜ್ಜನ್ ಕುಮಾರ್ ಹೆಸರನ್ನು ಹೇಳಿರಲಿಲ್ಲ. ಆದರೆ ಈಗ ಅವರು ತಮಗೆ ಮತ್ತು ತಮ್ಮ ಮಕ್ಕಳಿಗೆ ಬೆದರಿಕೆ ಇದ್ದ ಕಾರಣ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೆ ಸಜ್ಜನ್ ಕುಮಾರ್ ವಿರುದ್ಧ ಇನ್ನೂ ಮೂರ್ನಾಲ್ಕು ಮಂದಿ ಸಾಕ್ಷಿ ನುಡಿದಿರುವುದಾಗಿ ಆಂಗ್ಲ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಹಿಂಪಡೆದಿರುವ ತನ್ನ ಭದ್ರತೆಯನ್ನು ವಾಪಸ್ ಒದಗಿಸಬೇಕು ಎಂದು ಶೀಲಾ ಕೌರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಕೌರ್ ಅವರ ಕುಟುಂಬಕ್ಕೆ ಮೂರು ವರ್ಷಗಳಿಂದ ಭದ್ರತೆಯನ್ನು ಒದಗಿಸಲಾಗುತ್ತಿದ್ದು ಮೂರು ತಿಂಗಳ ಹಿಂದಷ್ಟೇ ವಾಪಸ್ ಪಡೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News