ಹಜ್ ಯಾತ್ರಿಕರ ಹೆಸರಿನಲ್ಲಿ ಹಣ ಸುಲಿಯುತ್ತಿದ್ದ ಏರ್ ಇಂಡಿಯಾ

Update: 2018-01-16 16:43 GMT

 ಹೊಸದಿಲ್ಲಿ, ಜ.16: ಹಜ್ ಯಾತ್ರೆಗೆ ಕೇಂದ್ರ ಸರಕಾರ ಈತನಕ ನೀಡುತ್ತಿದ್ದ ಸಬ್ಸಿಡಿಯಿಂದ ಯಾತ್ರಿಕರಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಅದಕ್ಕೆ ಬದಲಾಗಿ ಸಾರ್ವಜನಿಕರಂಗದ ವಾಯುಯಾನ ಸಂಸ್ಥೆ ಏರ್‌ಇಂಡಿಯಾಕ್ಕೆ ಇದರಿಂದ ಹೆಚ್ಚು ಲಾಭವಾಗಿದೆ. ನಷ್ಟದಲ್ಲಿ ನಡೆಯುತ್ತಿರುವ ಏರ್‌ಇಂಡಿಯಾಗೆ, ಹಜ್‌ಯಾತ್ರಿಕರಿಗೆ ನೀಡುತ್ತಿರುವ ಸಬ್ಸಿಡಿಯು ಒಳ್ಳೆಯ ವರಮಾನವನ್ನು ತಂದುಕೊಡುತ್ತಿತ್ತು. ಭಾರತ ಸರಕಾರದ ಪರವಾಗಿ ಹಜ್‌ಯಾತ್ರೆಯನ್ನು ವ್ಯವಸ್ಥೆ ಮಾಡುವ ಭಾರತೀಯ ಹಜ್ ಸಮಿತಿ (ಎಚ್‌ಸಿಓಐ) ಯು, ಹಜ್‌ಯಾತ್ರಿಕರಿಗೆ ಏರ್‌ಇಂಡಿಯಾದ ಮೂಲಕ ಹಜ್‌ಯಾತ್ರೆಯ ಏರ್ಪಾಡು ಮಾಡುತ್ತಿತ್ತು. ಈ ಟಿಕೆಟ್‌ಗಳಿಗೆ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತಿದ್ದುದರಿಂದ, ತಮಗೆ ಸರಕಾರದಿಂದ ದೊರೆಯುತ್ತಿದ್ದ ಸಬ್ಸಿಡಿಯಿಂದ ಹಜ್‌ಯಾತ್ರಿಕರಿಗೆ ಎಳ್ಳಷ್ಟೂ ಪ್ರಯೋಜನವಾಗುತ್ತಿರಲಿಲ್ಲ.

 ಪ್ರತಿವರ್ಷವೂ ಭಾರತದಿಂದ ಸುಮಾರು ಒಂದೂವರೆ ಲಕ್ಷ ಮುಸ್ಲಿಮರು ಹಜ್‌ಯಾತ್ರೆಗೆ ತೆರಳುತ್ತಾರೆ. ಹಜ್‌ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಾರತೀಯ ಮುಸ್ಲಿಮರು ಒಂದೋ ತಾವಾಗಿಯೇ ಪ್ರಯಾಣಿಸಬೇಕು ಇಲ್ಲವೇ ಸರಕಾರ ಪರವಾಗಿ ಪ್ರವಾಸ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಜ್ ಕಮಿಟಿಯ ಆಶ್ರಯದಲ್ಲಿ ಪ್ರಯಾಣಿಸಬೇಕಾಗುತ್ತದೆ. ಭಾರತೀಯ ಹಜ್ ಸಮಿತಿಯು ಶುಲ್ಕವನ್ನು ಪಡೆದುಕೊಂಡು, ಹಜ್ ಯಾತ್ರಿಕರ ಪ್ರಯಾಣ ಹಾಗೂ ವಾಸ್ತವ್ಯದ ವ್ಯವಸ್ಥೆಯನ್ನು ಮಾಡುತ್ತದೆ.

 ಕಳೆದ ವರ್ಷ ಎಚ್‌ಸಿಓಐ ಮೂಲಕ ಪ್ರಯಾಣಿಸಿದ 99,902 ಹಜ್ ಯಾತ್ರಿರು ತಮ್ಮ ಯಾತ್ರೆಗಾಗಿ 2,19,900 ರೂ. ಪಾವತಿಸಿದ್ದರು. ಇದರಲ್ಲಿ 45 ಸಾವಿರ ರೂ.ಗಳ ನಿರ್ಗಮನದ ಸಬ್ಸಿಡಿ ವಿಮಾನ ದರವೂ ಒಳಗೊಂಡಿತ್ತು. ಈ ಟಿಕೆಟ್‌ಗಳನ್ನು ಮುಂಗಡವಾಗಿ ಕಾದಿರಿಸಿದ್ದರೂ, ಈ ಶುಲ್ಕವು ದುಬಾರಿಯೇ ಆಗಿದೆ. ಸಾಮಾನ್ಯವಾಗಿ ಇತರ ವಿಮಾನಯಾನ ಸಂಸ್ಥೆಗಳಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಋತುವಿನಲ್ಲಿ ದಿಲ್ಲಿ-ಜಿದ್ದಾ ನಿರ್ಗಮನ (ರಿಟರ್ನ್) ಟಿಕೆಟ್ ದರ 30 ಸಾವಿರ ರೂ. ಆಗಿರುತ್ತದೆ. ಇದರಿಂದಾಗಿ ಭಾರತೀಯ ಹಜ್‌ಯಾತ್ರಿಕರು ಸ್ವದೇಶಕ್ಕೆ ಹಿಂದಿರುಗುವಾಗ ಸುಮಾರು 15 ಸಾವಿರ ರೂ. ಅಧಿಕ ಹಣವನ್ನು ಪಾವತಿಸಬೇಕಾಗುತ್ತಿತ್ತು.

2016-17ರ ಬಜೆಟ್‌ನಲ್ಲಿ ಕೇಂದ್ರ ಸರಕಾರವು ಹಜ್ ಸಬ್ಸಿಡಿಗಾಗಿ 450 ಕೋಟಿ ರೂ. ಅನುದಾನ ನೀಡಿತ್ತು. ಈ ಹಣವನ್ನು ಸಂಪೂರ್ಣವಾಗಿ ಹಜ್ ಯಾತ್ರಿಕರ ವಿಮಾನಯಾನದರವನ್ನು ಕಡಿಮೆಗೊಳಿಸಲು ಬಳಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News