ಭಿತ್ತಿಪತ್ರದಲ್ಲಿ ಮಮತಾ ಬ್ಯಾನರ್ಜಿ ಚಿತ್ರಕ್ಕೆ ಮಸಿ: ಜಾದವ್‌ಪುರ ವಿವಿಯಲ್ಲಿ ನಡೆದ ಘಟನೆ

Update: 2018-01-16 17:28 GMT

ಕೊಲ್ಕತ್ತಾ, ಜ.16: ಪಶ್ಚಿಮ ಬಂಗಾಳದ ಜಾದವ್‌ಪುರ ವಿಶ್ವವಿದ್ಯಾಲಯದ ಒಳಗೆ ಹಾಕಲಾಗಿದ್ದ ಭಿತ್ತಿಪತ್ರದಲ್ಲಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯನ್ನು ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ರಾಜ್ಯ ಶಿಕ್ಷಣ ಸಚಿವರು ಖಂಡಿಸಿದ್ದಾರೆ. ಜಾದವ್‌ಪುರ ವಿಶ್ವವಿದ್ಯಾಲಯಕ್ಕೆ ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಕಾರಣಕ್ಕೆ ಮಮತಾ ಬ್ಯಾನರ್ಜಿಯವರಿಗೆ ಕೃತಜ್ಞತೆ ಸೂಚಿಸುವ ಸಲುವಾಗಿ ವಿಶ್ವವಿದ್ಯಾಲಯದ ತೃಣಮೂಲ ಕಾಂಗ್ರೆಸ್ ಬೆಂಬಲಿತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಈ ಪೋಸ್ಟರ್‌ಅನ್ನು ಹಾಕಿದ್ದರು. ಅದರಲ್ಲಿದ್ದ ಬ್ಯಾನರ್ಜಿಯವರ ಮುಖಕ್ಕೆ ಕಪ್ಪು ಶಾಯಿಯ ಪೆನ್ನಿನಿಂದ ಗೀಚಲಾಗಿರುವುದು ರವಿವಾರದಂದು ಗಮನಕ್ಕೆ ಬಂದಿತ್ತು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸುರಂಜನ್ ದಾಸ್, ಈ ಘಟನೆ ದುರದೃಷ್ಟಕರವಾಗಿದ್ದು ಕಾರ್ಯಕಾರಿ ಮಂಡಳಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಮುಖ್ಯಮಂತ್ರಿಗಳ ಮುಖದ ಮೇಲೆ ಕಪ್ಪು ಶಾಯಿಯಿಂದ ಏನೋ ಬರೆಯಲಾಗಿದೆ. ಇಂಥ ಘಟನೆಗಳು ಭವಿಷ್ಯದಲ್ಲಿ ನಡೆಯಬಾರದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಸಂಘಟನೆಯನ್ನು ಬರ್ಖಾಸ್ತುಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದ ಕಾರಣ ದಾಸ್ ಅವರನ್ನು ವಿಶ್ವವಿದ್ಯಾಲಯದ ಆಡಳಿತ ಕಟ್ಟಡದಲ್ಲಿ ಕೂಡಿಹಾಕಲಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಹಾಕುವ ಹಕ್ಕಿದೆ ಎಂದು ದಾಸ್ ಹೇಳಿಕೊಂಡಿದ್ದಾರೆ. ಇದೇ ವೇಳೆ, ಭಿತ್ತಿಪತ್ರದಲ್ಲಿ ಮುಖ್ಯಮಂತ್ರಿಗಳ ಮುಖಕ್ಕೆ ಮಸಿ ಬಳಿದಿರುವವರನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವರಾದ ಪಾರ್ಥ ಚಟರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News