ರಮಾನಾಥ ರೈ ತನ್ನ ಕ್ಷೇತ್ರವನ್ನು ಬಿಲ್ಲವ, ಮುಸ್ಲಿಮ್ ಅಭ್ಯರ್ಥಿಗೆ ಬಿಟ್ಟು ಕೊಡಲಿ: ಹರಿಕೃಷ್ಣ ಬಂಟ್ವಾಳ್ ಸವಾಲು

Update: 2018-01-17 08:03 GMT

ಮಂಗಳೂರು, ಜ.17: ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಇತ್ತೀಚೆಗೆ ಸವಾಲು ಹಾಕಿದ್ದಾರೆ. ಆದರೆ ರೈ ಬಿಜೆಪಿಗೆ ಸವಾಲು ಹಾಕುವ ಬದಲು ಸ್ವತಃ ತಾನು ಪ್ರತಿನಿಧಿಸುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರವನ್ನು ಬಿಲ್ಲವರಿಗೆ ಬಿಟ್ಟು ಕೊಡಲಿ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಪ್ರತಿ ಸವಾಲು ಹಾಕಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ಪೂಜಾರಿ ಕಣ್ಣೀರು ಹಾಕುವಂತೆ ಮಾಡಿದ, ಚುನಾವಣೆಯಲ್ಲಿ ಅವರನ್ನು ಸೋಲಿಗೆ ಕಾರಣವಾಗಿರುವ ರಮಾನಾಥ ರೈಯವರಿಗೆ ಬಿಲ್ಲವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಮುಸ್ಲಿಮರ ಕೃಪೆಯಿಂದ ಗೆದ್ದು ಬಂದಿರುವುದಾಗಿ ಹೇಳುವ ರೈ ಮುಸ್ಲಿಮರಿಗಾಗಿ ತನ್ನ ಚುನಾವಣಾ ಕ್ಷೇತ್ರವನ್ನು ತ್ಯಾಗ ಮಾಡಲಿ ಎಂದು ಒತ್ತಾಯಿಸಿದ ಹರಿಕೃಷ್ಣ, ಸೋಲಿನ ಭೀತಿಯಿಂದ ಮುಸ್ಲಿಮರ ಓಲೆಕೈಯಲ್ಲಿ ತೊಡಗಿರುವ ರೈ ಇದೀಗ ಬಿಲ್ಲವ ಸಮುದಾಯವನ್ನು ಪ್ರಸ್ತಾಪಿಸುವ ಮೂಲಕ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ಬಾರಿಯ ಚುನಾವಣೆ ರಮಾನಾಥ ರೈಯವರ ಕೊನೆಯ ಬಯಲಾಟವಾಗಿದೆ. ರೈ ಮಹಿಷಾಸುರನಾದರೆ ಜನರು ದೇವಿಯ ರೂಪದಲ್ಲಿ ಅವರನ್ನು ಮುಗಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿತೇಂದ್ರ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News