ಪರ್ಯಾಯ ಮಹೋತ್ಸವಕ್ಕೆ 40 ಸಂಘಟನೆಗಳಿಂದ ಹೊರೆಕಾಣಿಕೆ

Update: 2018-01-17 10:32 GMT

ಉಡುಪಿ, ಜ.16: ಉಡುಪಿ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿಯ ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ ವಿವಿಧೆಡೆಗಳಿಂದ ಒಟ್ಟು 40 ಸಂಘ ಸಂಸ್ಥೆಗಳಿಂದ ಹೊರೆಕಾಣಿಕೆ ಹರಿದುಬಂದಿದ್ದು, ಇದರಿಂದ ಬಂದ ಸಾಮಗ್ರಿಗಳನ್ನು ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿರುವ ಪರ್ಯಾಯ ಉಗ್ರಾಣದಲ್ಲಿ ಆಕರ್ಷಕವಾಗಿ ಜೋಡಿಸಿ ಇಡಲಾಗಿದೆ.

ಜ.5ರಿಂದ 16ರವರೆಗೆ ಪ್ರತಿದಿನ ದೇವಸ್ಥಾನ, ಸಂಘ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳಿಂದ ಹೊರೆಕಾಣಿಕೆಯ ಮೂಲಕ ಧವಸ ಧಾನ್ಯ, ತರಕಾರಿ ಹಾಗೂ ಇತರ ಸಾಮಾಗ್ರಿಗಳನ್ನು ಸಮರ್ಪಿಸಲಾಯಿತು. ಈ ಬಾರಿ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಸಮುದಾಯದಿಂದಲೂ ಹೊರೆಕಾಣಿಕೆ ಸಲ್ಲಿಕೆಯಾಗಿರುವುದು ವಿಶೇಷವಾಗಿತ್ತು. ಬ್ರಾಹ್ಮಣ ಯುವ ಪರಿಷತ್ ಉಗ್ರಾಣದ ಜವಾಬ್ದಾರಿ ಹೊತ್ತು ಕೊಂಡಿದ್ದು, ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇದರ ನಿರ್ವಹಣೆ ಯನ್ನು ವಹಿಸಿಕೊಂಡಿದೆ.

ಈ ಬಾರಿಯ ಹೊರೆಕಾಣಿಕೆ ಮೂಲಕ ಒಟ್ಟು 25 ಕೆ.ಜಿ. ಗೋಣಿಯ ಒಟ್ಟು 1,800 ಕ್ವಿಂಟಾಲ್ ಅಕ್ಕಿ, 5,550 ಕೆ.ಜಿ. ಬೆಲ್ಲ, 25 ಸಾವಿರ ತೆಂಗಿನ ಕಾಯಿ, 1,800 ಲೀಟರ್ ಎಣ್ಣೆ, 200-300 ಬಾಳೆಗೊನೆ, 4,000 ಕುಂಬಳ ಕಾಯಿ, 300 ಬ್ಯಾಗ್ ಸೌತೆಕಾಯಿ, 1,800 ಕೆ.ಜಿ. ಸಕ್ಕರೆ, 3,500 ಕೆ.ಜಿ. ಮಟ್ಟುಗುಳ್ಳ, ಒಂದು ಲಾರಿ ಲೋಡು ಹರಳು, ಒಂದು ಲೋಡು ಮೈದಾಹಿಟ್ಟು, ಅದೇ ರೀತಿ ಕೊಡಂಬಿ, ದ್ರಾಕ್ಷಿ, ಕಾಶಿ ಕುಂಬಳಕಾಯಿ, ಹಲಸಂಡೆ, ಹಸಿ ಮೆಣಸು, ಕರಿಬೇವು, ಪಡವಲ ಕಾಯಿ, ಮುಳ್ಳು ಸೌತೆ, ಮರಸಣ ಗೆಡ್ಡೆ, ಗೆಡ್ಡೆ ಗೆಣಸು, ಹಲಸಿನ ಹಣ್ಣು, ಕಬ್ಬು, ಅಡಿಕೆ, ನಿಂಬೆ, ತೊಗರಿಬೇಳೆ ಸಮರ್ಪಿಸಲಾಗಿದೆ.
ಅದು ಅಲ್ಲದೆ ಸ್ಟೀಲ್ ಪಾತ್ರೆಗಳು, ಕಟ್ಟಿಗೆ ಹೊಡೆಯುವ ಯಂತ್ರ, ಪಂಚ ಗಜ್ಜಾಯ ಮಾಡುವ ಯಂತ್ರ, ಬುಟ್ಟಿಗಳು ಕೂಡ ಹೊರೆಕಾಣಿಕೆಯ ರೂಪದಲ್ಲಿ ಬಂದಿವೆ ಎಂದು ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಶಿವಾನಂದ ತಿಳಿಸಿದ್ದಾರೆ.

ಯೋಜನೆಯ ಕಾರ್ಯಕರ್ತರು ಹೊರೆಕಾಣಿಕೆಯಿಂದ ಸಾಮಗ್ರಿಗಳನ್ನು ಅಲಂಕೃತವಾಗಿ ಜೋಡಿಸಿ ಇಟ್ಟಿದ್ದು, ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಜೋಡಿ ಎತ್ತಿಗೆ ನೊಗ ಕಟ್ಟಿ ಉಳುತ್ತಿರುವ ರೈತ, ದೋಣಿಯಲ್ಲಿ ತುಂಬಿಸಿ ಇಟ್ಟಿರುವ ಮಟ್ಟುಗುಳ್ಳ, ಎತ್ತಿನ ಗಾಡಿಯಲ್ಲಿ ಧವಸ ಧಾನ್ಯಗಳು, ತರಕಾರಿಯಲ್ಲಿ ಕಲಾತ್ಮಕವಾಗಿ ರಚಿಸಿರುವ ರಥ ಎಲ್ಲರ ಗಮನ ಸೆಳೆಯುತ್ತಿದೆ.

‘ಈ ಬಾರಿ ರಾಜ ಛತ್ರಪತಿ ಶಿವಾಜಿ ಸಂಘವು ಹೊಸದಾಗಿ ಹೊರಕಾಣಿಕೆ ನಡೆಸಿದ ಸಂಘಟನೆಯಾಗಿದ್ದು, ಉಡುಪಿ ನಗರಸಭೆಯಿಂದ ಜ.8ರಂದು ನಿರ್ಧ ರಿಸಲಾದ ಹೊರಕಾಣಿಕೆಯನ್ನು ಕಾರಣಾಂತರಗಳಿಂದ ರದ್ಧುಪಡಿಸಿದರೂ ಬಳಿಕ ಅವರು ಹೊರೆಕಾಣಿಕೆಯನ್ನು ಸಲ್ಲಿಸಿಲ್ಲ’ ಎಂದು ಉಗ್ರಾಣದ ಜವಾಬ್ದಾರಿ ವಹಿಸಿಕೊಂಡಿರುವ ಪರ್ಯಾಯ ಸ್ವಾಗತ ಸಮಿತಿಯ ಜತೆ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ತಿಳಿಸಿದ್ದಾರೆ.

50,000 ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ
ಕಳೆದ ಪೇಜಾವರ ಪರ್ಯಾಯದಿಂದ ಆರಂಭಗೊಂಡ ರಾತ್ರಿ ಭೋಜನದ ವ್ಯವಸ್ಥೆಯು ಈ ಪರ್ಯಾಯದಲ್ಲೂ ಮುಂದುವರಿಸಿದ್ದು, ಜ.17ರಂದು ರಾತ್ರಿ 20,000 ಭಕ್ತಾಧಿಗಳಿಗೆ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನ್ನ, ಸಂಬಾರು ಹಾಗೂ ಒಂದು ಬಗೆಯ ಸಿಹಿ ತಿಂಡಿಯನ್ನು ನೀಡಲಾಗುತ್ತದೆ.

ಜ.18ರಂದು ದರ್ಬಾರ್ ಕಾರ್ಯಕ್ರಮದ ನಂತರ ಸುಮಾರು 45,000 ರಿಂದ 50,000 ಮಂದಿಗೆ ರಾಜಾಂಗಣದ ಪಾರ್ಕಿಂಗ್ ಪ್ರದೇಶದ ಎರಡು ಕಡೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಬೇಕಾದ ಅಡುಗೆಯನ್ನು ಮೂರು ಕಡೆಗಳಲ್ಲಿ ಮತ್ತು ಕೆಲವೊಂದು ಮಠಗಳಲ್ಲಿ ತಯಾರಿಸಲಾಗುತ್ತದೆ ಎಂದು ವೆಂಕಟರಮಣ ಮುಚ್ಚಿಂತ್ತಾಯ ತಿಳಿಸಿದರು.

4 ಲಕ್ಷ ಹೂಗಳ ಶೃಂಗಾರ: ಉಡುಪಿ ಶ್ರೀಕೃಷ್ಣ ಮಠ, ದರ್ಬಾರ್ ನಡೆಯುವ ರಾಜಾಂಗಣ ಹಾಗೂ ಪಲಿಮಾರು ಮಠವನ್ನು ಸುಮಾರು 4 ಲಕ್ಷ ಹೂವುಗಳಿಂದ ಶೃಂಗಾರಿಸುವ ಕಾರ್ಯ ನಡೆಯುತ್ತಿದೆ.

ಈ ಶೃಂಗಾರಕ್ಕೆ ಗೊಂಡೆ, ಜೀನಿಯಾ, ಕಾಕಡ, ಬಿಳಿ ಜಾಜಿ, ಡೇಲಿಯಾ, ಗುಲಾಬಿ, ಸ್ವಪ್ರಸ್ ಹೂವು, 4,000 ಅಡಿಕೆ, 500 ಸೀಯಾಳಗಳನ್ನು ಬಳಸಲಾಗಿದೆ. ಹೂವುಗಳನ್ನು ಶಿವಮೊಗ್ಗ, ಹಾಸನ, ತುಮಕೂರುಗಳಿಂದ ತರಿಸಲಾಗಿದೆ. ಈ ಕಾರ್ಯವನ್ನು ಪಡುಬಿದ್ರೆಯ ವನದುರ್ಗ ಫ್ರೆಂಡ್ಸ್ ನಡೆಸುತ್ತಿದೆ.
 ಭೋಜನ, ದರ್ಬಾರ್ ಹಾಲ್‌ಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವ ಹಿಸಲು ಉಡುಪಿ ಜಿಲ್ಲೆಯ 12 ಕಾಲೇಜುಗಳ 200 ರೇಂಜರ್ಸ್‌ ಆ್ಯಂಡ್ ರೋವರ್ಸ್‌ಗಳನ್ನು ನಿಯೋಜಿಸಲಾಗಿದೆ. ಆರು ಉಪನ್ಯಾಸಕರು ಹಾಗೂ ನಾಲ್ವರು ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದು ರೋವರ್ಸ್‌ ಅಧಿಕಾರಿ ಕೆ.ಉದಯ ಶೆಟ್ಟಿ ತಿಳಿಸಿದರು. .

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News