ಕುಂದಾಪುರ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಧರಣಿ

Update: 2018-01-17 10:35 GMT

ಕುಂದಾಪುರ, ಜ.17: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿ ಯರ ಸಂಘದ ವತಿಯಿಂದ ಬುಧವಾರ ಕುಂದಾಪುರ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಲಾಯಿತು.

ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾ ಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಮಾತನಾಡಿ, 18 ಸಾವಿರ ರೂ. ಕನಿಷ್ಠ ವೇತನ ಜಾರಿ ಮಾಡಬೇಕು. ಕನಿಷ್ಠ ಮಾಸಿಕ ಪಿಂಚಣಿ 3 ಸಾವಿರ ರೂ. ಏರಿಸಬೇಕು. ಗೋವಾ ರಾಜ್ಯದ ಮಾದರಿಯಲ್ಲಿ ಗೌರವಧನ, ವೇತನ ಹೆಚ್ಚಿಸ ಬೇಕು. ಸಾದಿಲ್ವಾರು ವೆಚ್ಚವನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೀಡಬೇಕು. ಅನಾರೋಗ್ಯ ಪೀಡಿತ ನೌಕರರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಿ, ಎಲ್ಲ ಸೌಲಭ್ಯಗಳನ್ನು ನೀಡಬೇಕು. ಅಂಗನವಾಡಿ ನೌಕರರನ್ನು ಸಿ ಹಾಗೂ ಡಿ ಗ್ರೂಪ್ ನೌಕರರನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರಿಗೆ ಮಾತೃಪೂರ್ಣ ಯೋಜನೆ ಹೊರೆಯಾಗಿದ್ದು, ಶಿರೂರಿನಂತಹ ಗ್ರಾಮೀಣ ಪ್ರದೇಶಗಳ ಕೇಂದ್ರಗಳಲ್ಲಿ ಇನ್ನೂ ಸಹಾಯಕಿಯರ ನೇಮಕ ಮಾಡಿಲ್ಲ. ಇದರಿಂದ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ. ಆದುದರಿಂದ ಈ ಯೋಜನೆಯ ಬದಲು ಉಡುಪಿ ಜಿಲ್ಲೆಯಲ್ಲಿ ಈ ಹಿಂದಿ ನಂತೆ ಮನೆಗೆ ಆಹಾರ ನೀಡುವ ಯೋಜನೆಯನ್ನು ಜಾರಿಗೆ ತರಬೇಕು ಎಂದವರು ತಿಳಿಸಿದರು.

ಈ ಕುರಿತು ಮನವಿಯನ್ನು ತಹಶೀಲ್ದಾರ್ ಜಿ.ಎಂ.ಬೋರ್ಕರ್ ಅವರಿಗೆ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ಉಷಾ ಕೆ., ತಾಲೂಕು ಸಂಘದ ಕಾರ್ಯದರ್ಶಿ ನಾಗರತ್ನಾ, ಕೋಾಧಿಕಾರಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News