ಆಧಾರ್ ಜನತೆಯ ಪೌರಹಕ್ಕನ್ನು ನಾಶಪಡಿಸಲಿದೆ: ಸುಪ್ರೀಂಕೋರ್ಟ್‌ನಲ್ಲಿ ವಕೀಲರ ಹೇಳಿಕೆ

Update: 2018-01-17 12:55 GMT

ಹೊಸದಿಲ್ಲಿ, ಜ.17: ಆಧಾರ್ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಆದರ್ಶ್ ಕುಮಾರ್ ಸಿಕ್ರಿ, ಡಿ.ವೈ.ಚಂದ್ರಚೂಡ್ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡಿದ್ದು, ಆಧಾರ್ ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂಬ ಕುರಿತು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿ, ಆಧಾರ್ ಜನತೆಯ ಪೌರ ಹಕ್ಕು ಸಾಯಲು ಕಾರಣವಾಗಬಹುದು. ಜನತೆಯ ಸಂವಿಧಾನವನ್ನು ಸರಕಾರದ ಸಂವಿಧಾನವನ್ನಾಗಿ ಬದಲಿಸಲು ಬಯಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು.

ಖಾಸಗಿತನದ ಹಕ್ಕು ಸಂವಿಧಾನಾತ್ಮಕವಾಗಿ ಲಭಿಸಿದ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ನ 9 ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಕಳೆದ ಆಗಸ್ಟ್‌ನಲ್ಲಿ ತಿಳಿಸಿತ್ತು. ಆಧಾರ್‌ನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳಲ್ಲಿ ಆಧಾರ್ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ.

ಅಲ್ಲದೆ ಇತ್ತೀಚೆಗೆ ‘ದಿ ಟ್ರಿಬ್ಯೂನ್’ನಲ್ಲಿ ಪ್ರಕಟವಾದ ವರದಿಯೊಂದು 'ಕೇವಲ 500 ರೂ. ಪಾವತಿಸಿದರೆ ಆಧಾರ್ ಮಾಹಿತಿಯನ್ನು ಪಡೆಯಲು ಸಾಧ್ಯ' ಎಂದು ತಿಳಿಸಿದೆ. 12 ಸಂಖ್ಯೆಯ ಆಧಾರ್ ನಂಬರನ್ನು ಮೊಬೈಲ್ ಫೋನ್, ಬ್ಯಾಂಕ್ ಖಾತೆಗಳು ಹಾಗೂ ಇನ್ನಿತರ ಸೇವೆಗಳಿಗೆ ಕಡ್ಡಾಯವಾಗಿ ಜೋಡಿಸಬೇಕು ಎಂಬ ಸರಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ದಾಖಲಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಖಾತೆಗಳಿಗೆ ಜೋಡಿಸುವುದು ಅಕ್ರಮ ಹಾಗೂ ಅಸಾಂವಿಧಾನಿಕವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕಳೆದ ನವೆಂಬರ್ 12ರಂದು ಕರ್ನಾಟಕ ಮೂಲದ ಮ್ಯಾಥ್ಯೂ ಥಾಮಸ್ ಎಂಬವರು ಆಧಾರ್ ಕಾರ್ಡ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಸಮ್ಮತಿಸಿತ್ತು. ಡಿ.7ರಂದು ಆಧಾರ್ ಸಂಖ್ಯೆಯನ್ನು ವಿವಿಧ ಯೋಜನೆಗಳಿಗೆ ಜೋಡಿಸುವ ಅಂತಿಮ ದಿನಾಂಕವನ್ನು ಕೇಂದ್ರ ಸರಕಾರ 2018ರ ಮಾರ್ಚ್ 31ಕ್ಕೆ ವಿಸ್ತರಿಸಿತ್ತು.

ಈ ಮಧ್ಯೆ, ಜನವರಿ 10ರಂದು ಯುಐಡಿಎಐ(ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ) ‘ವರ್ಚುವಲ್ ಐಡಿ’ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News