ಬಿಜೆಪಿ ಆಡಳಿತದಲ್ಲಿ ತೊಗಾಡಿಯಾಗೆ ರಕ್ಷಣೆಯಿಲ್ಲ: ಹಾರ್ದಿಕ್ ಪಟೇಲ್

Update: 2018-01-17 13:37 GMT

ಗಾಂಧೀನಗರ, ಜ.17: ವಿಶ್ವಹಿಂದು ಪರಿಷದ್ ನಾಯಕ ಪ್ರವೀಣ್ ತೊಗಾಡಿಯಾ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭ ಸುರಕ್ಷಿತವಾಗಿದ್ದರು. ಆದರೆ ಬಿಜೆಪಿ ಆಡಳಿತ ಬಂದೊಡನೆ ಅವರಲ್ಲಿ ಅಭದ್ರತೆ ಹಾಗೂ ಅಸುರಕ್ಷತೆಯ ಭಾವನೆ ನೆಲೆಸಿದೆ ಎಂದು ಪಟಿದಾರ್ ಚಳವಳಿಯ ಮುಖಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

 ವಿಹಿಂಪ ನಾಯಕ ತೊಗಾಡಿಯಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಟೇಲ್, ಬಿಜೆಪಿ ಆಡಳಿತದಲ್ಲಿ ತೊಗಾಡಿಯಾಗೆ ರಕ್ಷಣೆಯಿಲ್ಲ ಎಂದರು. ಸೋಮವಾರ ತೊಗಾಡಿಯಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ತೊಗಾಡಿಯಾರನ್ನು ಬಂಧಿಸಲು ರಾಜಸ್ತಾನ ಪೊಲೀಸರು ಗುಜರಾತ್ ರಾಜ್ಯದ ಅಹ್ಮದಾಬಾದ್‌ಗೆ ಆಗಮಿಸಿ ಅವರನ್ನು ವಶಕ್ಕೆ ಪಡೆದುಕೊಂಡ ಬಳಿಕ ತೊಗಾಡಿಯಾ ನಾಪತ್ತೆಯಾಗಿದ್ದಾರೆ ಎಂಬುದು ವಿಹಿಂಪದ ಆರೋಪ. ಆದರೆ ತಾವು ತೊಗಾಡಿಯಾ ನಿವಾಸಕ್ಕೆ ತೆರಳಿದ್ದಾಗ ಅವರು ಮನೆಯಲ್ಲಿ ಇರಲಿಲ್ಲ ಎಂದು ರಾಜಸ್ತಾನದ ಪೊಲೀಸರು ತಿಳಿಸಿದ್ದರು.

ಇದಾದ ಬಳಿಕ ಅಂದು ರಾತ್ರಿ ವೇಳೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ತೊಗಾಡಿಯಾರವನ್ನು ಗಾಂಧೀನಗರದ ಚಂದ್ರಮಣಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವಿಧ ಪ್ರಕರಣಗಳಲ್ಲಿ ತನ್ನನ್ನು ಸಿಕ್ಕಿಸಿಹಾಕಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತೊಗಾಡಿಯಾ ದೂರಿದ್ದರು. ಬಳಿಕ ಸುದ್ದಿಗೋಷ್ಟಿಯಲ್ಲಿ ಕಣ್ಣೀರು ಹಾಕಿದ್ದ ತೊಗಾಡಿಯಾ, ರಾಮಮಂದಿರ, ರೈತರ ಕಲ್ಯಾಣಯೋಜನೆಗಳು, ಗೋಹತ್ಯೆ ಕುರಿತ ಕಾನೂನು.. ಇತ್ಯಾದಿಗಳ ವಿಷಯದಲ್ಲಿ ತನ್ನ ಬಾಯಿಮುಚ್ಚಿಸಲು ಪ್ರಯತ್ನಿಸಲಾಗುತ್ತಿದೆ . ನಕಲಿ ಎನ್‌ಕೌಂಟರ್ ನಡೆಸಿ ತನ್ನನ್ನು ಕೊಲ್ಲಲು ಕೆಲವರು ಪ್ರಯತ್ನಿಸುವ ಸಾಧ್ಯತೆಯಿದೆ ಎಂದು ಹೇಳಿದ್ದರು.

ಈ ಮಧ್ಯೆ, ಮಂಗಳವಾರ ಕಾಂಗ್ರೆಸ್ ಮುಖಂಡ ಅರ್ಜುನ್ ಮೊಧ್‌ವಾಡಿಯ ಆಸ್ಪತ್ರೆಗೆ ತೆರಳಿ ತೊಗಾಡಿಯಾರನ್ನು ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News