ದಕ್ಷಿಣ ಆಫ್ರಿಕ ಪತ್ರಕರ್ತನ ಮೇಲೆ ಹರಿಹಾಯ್ದ ಕೊಹ್ಲಿ

Update: 2018-01-17 15:24 GMT

ಸೆಂಚೂರಿಯನ್, ಅ.17: ಪೂರ್ಣಕಾಲಿಕ ನಾಯಕನಾದ ಬಳಿಕ ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಬಾರಿ ಟೆಸ್ಟ್ ಸರಣಿ ಸೋತಿರುವ ವಿರಾಟ್ ಕೊಹ್ಲಿ ಶ್ರೇಷ್ಠ 11 ಆಟಗಾರರು ಹಾಗೂ ವಿದೇಶಿ ನೆಲದಲ್ಲಿ ಕಳಪೆ ದಾಖಲೆಯ ಬಗ್ಗೆ ಪತ್ರಕರ್ತ ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಘಟನೆ ಬುಧವಾರ ನಡೆದಿದೆ.

 ಉಪಖಂಡದ ವಾತಾವರಣ ಹೊಂದಿರುವ ಸೆಂಚೂರಿಯನ್‌ನಲ್ಲಿ ನೀವು ಶ್ರೇಷ್ಠ 11 ತಂಡವನ್ನು ಕಣಕ್ಕಿಳಿಸಿದ್ದೀರಾ? ಎಂದು ಪತ್ರಕರ್ತರ ಪ್ರಶ್ನೆಗೆ ಗರಂ ಆದ ಕೊಹ್ಲಿ,‘‘ಶ್ರೇಷ್ಠ 11 ಎಂದರೇನು? ನಾವು ಈ ಪಂದ್ಯವನ್ನು ಜಯಿಸಿದ್ದರೆ ನಮ್ಮದು ಶ್ರೇಷ್ಠ 11 ತಂಡವಾಗುತ್ತಿತ್ತಾ? ಫಲಿತಾಂಶವನ್ನು ಆಧರಿಸಿ 11ರ ಬಳಗವನ್ನು ನಾವು ನಿರ್ಧರಿಸುವುದಿಲ್ಲ. ಶ್ರೇಷ್ಠ 11 ಆಟಗಾರರು ಯಾರೆಂದು ನೀವೇ ಹೇಳಿ. ನಾವು ಆ ತಂಡದೊಂದಿಗೆ ಆಡುತ್ತೇವೆ’’ ಎಂದರು.

ಭಾರತ ತಂಡ ದಕ್ಷಿಣ ಆಫ್ರಿಕ ವಿರುದ್ಧ ಆಡಿರುವ ಎರಡು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಬದಲಿಗೆ ರೋಹಿತ್ ಶರ್ಮರನ್ನು ಆಡುವ 11ರ ಬಳಗಕ್ಕೆ ಆಯ್ಕೆ ಮಾಡಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

‘‘ಸೋಲು ನೋವುಂಟು ಮಾಡುತ್ತದೆ. ಆದರೆ, ಒಂದು ನಿರ್ಧಾರ ತೆಗೆದುಕೊಂಡ ಬಳಿಕ ಬದಲಿಸಲು ಸಾಧ್ಯವಿಲ್ಲ. ನಾವು ಯಾರನ್ನೇ ಆಯ್ಕೆ ಮಾಡಿದರೂ ಅವರು ಶ್ರೇಷ್ಠ ಪ್ರದರ್ಶನ ನೀಡಲು ಶಕ್ತರಾಗಿದ್ದಾರೆ. ಹಾಗಾಗಿ ನಾವು ಇಷ್ಟು ದೊಡ್ಡ ತಂಡ ಹೊಂದಿದ್ದೇವೆ. ಸಂಘಟಿತವಾಗಿ ಆಡುವ ಅಗತ್ಯವಿದೆ. ಯಾವುದು ಶ್ರೇಷ್ಠ 11 ಎಂದು ಬೊಟ್ಟು ಮಾಡಲು ಸಾಧ್ಯವಿಲ್ಲ’’ ಎಂದರು.

 34ರಲ್ಲಿ ಎಷ್ಟು ಪಂದ್ಯ ಗೆದ್ದಿದ್ದೇವೆ? ಸೋತಿದ್ದೇವೆ, ಡ್ರಾಗೊಳಿಸಿದ್ದೇವೆ ಎನ್ನುವುದು ಇಲ್ಲಿ ಮುಖ್ಯವಲ್ಲ. ನಾವು ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಿದ್ದೇವೆ. ನಾನು ಇಲ್ಲಿಗೆ ನಿಮ್ಮ ಪ್ರಶ್ನೆಗೆ ಉತ್ತರಿಸಲು ಬಂದಿದ್ದೇನೆ. ನಿಮ್ಮೆಂದಿಗೆ ಸೆಣಸಾಡಲು ಅಲ್ಲ ಎಂದರು.

ಸರಣಿ ಆರಂಭಕ್ಕೆ ಮೊದಲು ನೀವು ನಂ.1 ಟೆಸ್ಟ್ ತಂಡ. ಸರಣಿ ಸೋತ ಬಳಿಕವೂ ನೀವು ನಂ.1 ಎಂದು ನಂಬಿದ್ದೀರಾ? ಎಂದು ಕೇಳಿದಾಗ,‘‘ ನಾವೇ ಶ್ರೇಷ್ಠರೆಂದು ಭಾವಿಸಿದ್ದೇವೆ. ನಾವು ಇಲ್ಲಿಗೆ ಪಂದ್ಯ ಆಡಲು ಬಂದಿದ್ದೇವೆ. ನಿಮ್ಮ ಪ್ರಶ್ನೆಗೆ ಉತ್ತರಿಸಲು ಬಂದಿಲ್ಲ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News