ತ್ರಿವಳಿ ತಲಾಖ್ ಅರ್ಜಿದಾರೆ, ಬಿಜೆಪಿಯ ಇಶ್ರತ್ ಜಹಾನ್ ಯಾರು?

Update: 2018-01-17 16:18 GMT

ಹೊಸದಿಲ್ಲಿ, ಜ.17: ತ್ರಿವಳಿ ತಲಾಕ್… ಇದು ಕಳೆದ ಕೆಲ ದಿನಗಳ ಹಿಂದೆ ದೇಶದಲ್ಲಿ ಸುದ್ದಿಯಾದ ವಿವಾದಾತ್ಮಕ ವಿಷಯ. ತ್ರಿವಳಿ ತಲಾಖ್ ಗೆ ಸಂಬಂಧಿಸಿ “ನನ್ನ ಪತಿಯಿಂದ ನನಗೆ ಅನ್ಯಾಯವಾಗಿದೆ. ಆತ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದಾನೆ” ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಇಶ್ರತ್ ಜಹಾನ್ ಎಂಬ ಮಹಿಳೆ. ನಂತರ ಈ ವಿಷಯದ ಬಗ್ಗೆ ಚರ್ಚೆಗಳು ನಡೆದು ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರವೂ ದೊರೆತಿತ್ತು.

ಈ ಒಟ್ಟು ಪ್ರಕರಣದ ಹಿಂದಿನ ಇಶ್ರತ್ ಜಹಾನ್ ಎಂದರೆ ಯಾರು?, ಈಕೆಗೆ ಪತಿ ವಿಚ್ಛೇದನ ನೀಡಿದ್ದಾರಾ?, ಈಕೆ ಮಾಡುತ್ತಿರುವ ಆರೋಪಗಳು ಸತ್ಯವೇ ಅಥವಾ ಸುಳ್ಳೇ ಎನ್ನುವ ಬಗ್ಗೆ ವಿವರ ಸಂಗ್ರಹಿಸಿ ‘ಮಿಲ್ಲತ್ ಟೈಮ್ಸ್’ (millattimes.com) ವೆಬ್ ಸೈಟ್ ವಿಶೇಷ ವರದಿ ಪ್ರಕಟಿಸಿದೆ. ಈ ವರದಿಯ ಮುಖ್ಯಾಂಶಗಳು ಈ ಕೆಳಗಿವೆ.

ಇಶ್ರತ್ ಜಹಾನ್ ಳ ಮನೆ ಇರುವುದು ಬಿಹಾರದ ನೌದಾ ಜಿಲ್ಲೆಯ ಪಕ್ರಿ ಬರಾವಾ ಎಂಬಲ್ಲಿ. ಈಕೆಯ ತಂದೆಯ ಹೆಸರು ಹಬೀಬ್ ಅಖ್ತರ್. ಇವರು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದಾರೆ. 2002ರಲ್ಲಿ ಔರಂಗಬಾದ್  ಬಿಹಾರ್ ನ ಮುರ್ತಝಾ ಅನ್ಸಾರಿ ಎಂಬವರೊಂದಿಗೆ ಇಶ್ರತ್ ಜಹಾನ್ ಳ ವಿವಾಹ ನೆರವೇರಿತ್ತು. ಅನ್ಸಾರಿಯವರಿಗೆ ಮೂರು ಹೆಣ್ಣು, ಒಂದು ಗಂಡು ಮಗು ಸೇರಿ ನಾಲ್ವರು ಮಕ್ಕಳಿದ್ದಾರೆ. ಮದುವೆಯ ನಂತರ ಕಲ್ಕತ್ತಾದಲ್ಲಿ ವಾಸವಾಗಿದ್ದ ಅನ್ಸಾರಿ ನಂತರ ಉದ್ಯೋಗ ಅರಸಿ ದುಬೈಗೆ ತೆರಳಿದ್ದರು. 2009ರವರೆಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ನಂತರ ಇಶ್ರತ್ ಸುಮಾರು 3 ಬಾರಿ ಮನೆ ಬಿಟ್ಟು ಓಡಿ ಹೋಗಿದ್ದಳು ಎಂದು ಅನ್ಸಾರಿ ಹೇಳುತ್ತಾರೆ.

ಈ ಘಟನೆಗಳ ನಂತರ ಅನ್ಸಾರಿ ಕಲ್ಕತ್ತದಿಂದ ಊರಿಗೆ ಮರಳಿದರು. ಅನ್ಸಾರಿಯವರ ತಂದೆ ಮೃತಪಟ್ಟ ಬಳಿಕ ಇಶ್ರತ್ ತನ್ನ ನಾಲ್ಕು ಮಕ್ಕಳೊಂದಿಗೆ ಊರಿನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಳು. 2014 ಮಾರ್ಚ್ ತಿಂಗಳ ಒಂದು ದಿನ ಅನ್ಸಾರಿಯವರ ಮೊಬೈಲ್ ಗೆ ನೆರೆಮನೆಯ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು, ಅನ್ಸಾರಿಯವರು ಆ ನಂಬರ್ ಗೆ ಕರೆ ಮಾಡಿದ್ದಾಗ ಆ ಕಡೆಯಿಂದ ಅನ್ಸಾರಿಯ ಪುತ್ರಿ ಶಾಯಿಸ್ತಾ ಮಾತನಾಡಿದ್ದಳು.ನಾಲ್ಕು ಮಕ್ಕಳನ್ನು ಬಿಟ್ಟು ಇಶ್ರತ್ ಮನೆ ಬಿಟ್ಟು ಓಡಿ ಹೋಗಿರುವುದಾಗಿ ಮಗಳು ಅನ್ಸಾರಿಗೆ ತಿಳಿಸಿದ್ದಳು.

ಇದಾದ ನಂತರ ಊರಿನ ವಿಧವೆ ಮಹಿಳೆಯೊಬ್ಬರು ಅನ್ಸಾರಿಯ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. 14 ತಿಂಗಳ ನಂತರ ದುಬೈಯಿಂದ ಊರಿಗೆ ಬಂದ ಅನ್ಸಾರಿ ಇಶ್ರತ್ ಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.  ಈ ಬಗ್ಗೆ ಸ್ಥಳೀಯ ಪಂಚಾಯತ್ ಹಾಗೂ ಪೊಲೀಸ್ ಠಾಣೆಯಲ್ಲೂ ದೂರು ನೀಡಲಾಗಿತ್ತು. ಇಶ್ರತ್ ಳನ್ನು ಕರೆದು ಬುದ್ಧಿಯನ್ನೂ ಹೇಳಲಾಯಿತು. ಆದರೆ ಆಕೆ ಅದ್ಯಾವುದಕ್ಕೂ ಕಿವಿಗೊಡಲಿಲ್ಲ ಎಂದು ಅನ್ಸಾರಿ ಆರೋಪಿಸುತ್ತಾರೆ.

ಇದಾದ ಕೆಲ ದಿನಗಳಲ್ಲಿ ಕುಟುಂಬಸ್ಥರು ಅನ್ಸಾರಿ ಇನ್ನೊಂದು ಮದುವೆಯಾಗುವಂತೆ ಒತ್ತಾಯಿಸಿದ್ದರು. ಹೆಣ್ಣು ನೋಡಿ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ದಿನ ಇಶ್ರತ್ ರಾದ್ಧಾಂತ ಮಾಡಿದ್ದಳು. “ಅನ್ಸಾರಿ ನನ್ನ ಪತಿ. ನನ್ನ ಇಚ್ಛೆಗೆ ವಿರುದ್ಧವಾಗಿ ಹೇಗೆ ಮದುವೆ ಮಾಡುತ್ತೀರಿ” ಎಂದು ಇಶ್ರತ್ ಹೆಣ್ಣಿನ ಮನೆಯವರನ್ನು ಗದರಿಸಿದ್ದಳು ಎಂದು ಅನ್ಸಾರಿ ಹೇಳುತ್ತಾರೆ. ಇಲ್ಲಿಯವರೆಗೆ ಇಶ್ರತ್ ಗೆ ತಾನು ಯಾವುದೇ ರೀತಿಯ ತಲಾಖ್ ನೀಡಿಲ್ಲ ಎನ್ನುವ ಅನ್ಸಾರಿ ಇದಕ್ಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಾಕ್ಷ್ಯ ಲಭ್ಯವಿದೆ ಎಂದು ಹೇಳುತ್ತಾರೆ.

ತನ್ನ ತಾಯಿಗೆ ಅಫ್ಝಲ್ ಎಂಬವನೊಂದಿಗೆ ಅನೈತಿಕ ಸಂಬಂಧವಿತ್ತು. ತಂದೆ ದುಬೈಯಲ್ಲಿದ್ದಾಗ ಆತ ಮನೆಗೆ ಬರುತ್ತಿದ್ದ. ನಾಲ್ಕು ದಿನಗಳ ಕಾಲವೂ ಮನೆಯಲ್ಲಿದ್ದ. ಕಲ್ಕತ್ತಾದಲ್ಲಿದ್ದಾಗಲೂ ತಾಯಿ ಮನೆಯಿಂದ ನಾಪತ್ತೆಯಾಗುತ್ತಿದ್ದಳು ಎಂದು ಇಶ್ರತ್ ಮತ್ತು ಅನ್ಸಾರಿಯ ಹಿರಿಯ ಪುತ್ರಿ ಶಾಯಿಸ್ತಾ ಹೇಳುತ್ತಾಳೆ.

ಈ ಬಗ್ಗೆ ‘ಮಿಲ್ಲತ್ ಟೈಮ್ಸ್’ ಇಶ್ರತ್ ಜಹಾನ್ ಳನ್ನು ಸಂಪರ್ಕಿಸಿದ್ದು, ತನ್ನ ಪತಿ ದುಬೈಯಿಂದಲೇ ಫೋನ್ ಮೂಲಕ ಮೂರು ತಲಾಖ್ ಹೇಳಿದ್ದರು ಎಂದಿದ್ದಾರೆ. ಆದರೆ ಈ ಬಗ್ಗೆ ಸಾಕ್ಷಿ ಇದೆಯೇ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ಈ ಕುರಿತು ಇಶ್ರತ್ ರ ವಕೀಲೆ ನಾಝಿಯಾ ಇಲಾಹಿ ಖಾನ್ ರನ್ನೂ ಸಂಪರ್ಕಿಸಲಾಗಿದ್ದು, ಇಶ್ರತ್ ಜಹಾನ್ ರಿಗೆ ಅನ್ಸಾರಿ ತಲಾಖ್ ಹೇಳಿರುವ ಬಗ್ಗೆ ದಾಖಲೆಗಳಿವೆಯೇ ಎಂದು ಪ್ರಶ್ನಿಸಿದ್ದಕ್ಕೆ ‘ಇಲ್ಲ’ ಎಂದು ಉತ್ತರಿಸಿದ್ದಾರೆ.

ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಯಾವ ಆಧಾರದ ಮೇಲೆ ನಡೆಯಿತು ಎಂದು ಪ್ರಶ್ನೆಗೆ, ಒಂದೇ ಬಾರಿ ಮೂರು ತಲಾಖ್ ಹೇಳುವುದರ ವಿರುದ್ಧ ಅರ್ಜಿಯನ್ನು ನೀಡಲಾಗಿತ್ತು.  ಈ ಸಂಪ್ರದಾಯ ಮುಸ್ಲಿಮ್ ಸಮಾಜದಲ್ಲಿ ಇರಕೂಡದು ಎಂದು ತಿಳಿಸಿದ್ದಾಗಿ ಮಿಲ್ಲತ್ ಟೈಮ್ಸ್ ವರದಿ ಮಾಡಿದೆ.

ಮುರ್ತಝಾ ಅನ್ಸಾರಿಗೆ ನ್ಯಾಯಾಲಯವೂ ಯಾವುದೇ ನೊಟೀಸ್ ಜಾರಿ ಮಾಡಲಿಲ್ಲ. ಮತ್ತು ಅವರ ಅಭಿಪ್ರಾಯವನ್ನು ಕೇಳಲಿಲ್ಲ ಎಂದೂ ವಕೀಲೆ ನಾಝಿಯಾ ಹೇಳಿದ್ದಾರೆ. ಈ ಪ್ರಕರಣದಲ್ಲಿ ಮುರ್ತಝಾ ಅನ್ಸಾರಿಗೂ ಸುಪ್ರಿಂ ಕೋರ್ಟನಿಂದ ಯಾವುದೇ ನೋಟಿಸ್ ಬಂದಿಲ್ಲ ಎನ್ನಲಾಗಿದೆ.

2014 ರಲ್ಲಿ ಇಶ್ರತ್ ಮನೆಯಿಂದ ಓಡಿ ಹೋದ ನಂತರವೂ ಅನ್ಸಾರಿ ಆಕೆಗೆ ಜೀವನಾಂಶವನ್ನು ನೀಡುತ್ತಿದ್ದರು. 2015ರಲ್ಲಿ ಅದನ್ನುನಿಲ್ಲಿಸಿದ್ದಾರೆ. ಇದಾದ ನಂತರವ ವಕೀಲೆ ನಾಝಿಯಾ ತ್ರಿವಳಿ ತಲಾಖ್‌ಎಂದು  ಸುಪ್ರಿಂ ಕೋರ್ಟ್ ಮೆಟ್ಟಲೇರಿದ್ದಾರೆ ಅನ್ಸಾರಿ ಹೇಳುತ್ತಾರೆ.

2015ರಲ್ಲಿ ಇಶ್ರತ್ ಜಹಾನ್ ನ್ಯಾಯವಾದಿ ನಾಝಿಯಾ ಇಲಾಹಿ ಖಾನ್ ರನ್ನು ಭೇಟಿಯಾಗಿದ್ದರು. ಪತಿ ದುಬೈಯಿಂದಲೇ ಫೋನ್ ಕರೆ ಮೂಲಕ ಮೂರು ಬಾರಿ ತಲಾಖ್ ಹೇಳಿದ್ದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಾಝಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆಯುತ್ತಿದ್ದಂತೆ ಇಶ್ರತ್ ಜಹಾನ್ ಮತ್ತು ನಾಝಿಯಾ ಇಲಾಹಿ ಖಾನ್ ಬಿಜೆಗೆ ಸೇರ್ಪಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News