ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ರನೌಟಾದ ಭಾರತದ ಮೊದಲ ಆಟಗಾರ ಪೂಜಾರ

Update: 2018-01-17 18:00 GMT

ಸೆಂಚೂರಿಯನ್, ಜ.17: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ರನೌಟಾದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಪೂಜಾರ ಸೂಪರ್‌ಸ್ಪೋರ್ಟ್ಸ್ ಪಾರ್ಕ್‌ನ ಎರಡನೇ ಟೆಸ್ಟ್ ನಲ್ಲಿ ಈ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದಾರೆ. ಭಾರತ ಇನಿಂಗ್ಸ್‌ನ 27ನೇ ಓವರ್‌ನಲ್ಲಿ ಪಾರ್ಥಿವ್ ಪಟೇಲ್ ಮೂರು ರನ್ ಗಳಿಸಲು ಪೂಜಾರಗೆ ಒತ್ತಡ ಹೇರಿದರು. ಚುರುಕಿನ ಫೀಲ್ಡಿಂಗ್ ನಡೆಸಿದ ಎಬಿಡಿವಿಲಿಯರ್ಸ್ ಹಾಗೂ ವಿಕೆಟ್‌ಕೀಪರ್ ಡಿಕಾಕ್ ಸೇರಿಕೊಂಡು ಪೂಜಾರರನ್ನು ರನೌಟ್ ಮಾಡಿದರು. ಪೂಜಾರ ಅವರ ಮೊದಲ ಇನಿಂಗ್ಸ್‌ನಲ್ಲಿ ಖಾತೆ ತೆರೆಯುವ ಮೊದಲೇ ಗಿಡಿಯಿಂದ ರನೌಟಾಗಿದ್ದರು.

2000ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಝಿಂಬಾಬ್ವೆ ವಿರುದ್ಧ ನ್ಯೂಝಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ ಕೊನೆಯ ಬಾರಿ ಇಂತಹ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದರು.

ಟೆಸ್ಟ್‌ನಲ್ಲಿ ಸತತ ಎರಡು ಬಾರಿ ರನೌಟಾಗಿರುವುದು ಟೆಸ್ಟ್ ಕ್ರಿಕೆಟ್‌ನ 25ನೇ ದೃಷ್ಟಾಂತವಾಗಿದೆ. 3ನೇ ಕ್ರಮಾಂಕದ ಬ್ಯಾಟ್ಸ್ ಮನ್ ಈ ರೀತಿ ಔಟಾಗಿರುವುದು ಮೂರನೇ ಬಾರಿಯಾಗಿದೆ. ಹ್ಯಾನ್ಸಿ ಕ್ರೋನಿಯೆ, ಮರ್ವನ್ ಅಟಪಟ್ಟು, ಆಡಮ್ ಪರೊರ್, ಇಯಾನ್ ಹೀಲಿ, ಮಾರ್ಕ್ ಟೇಲರ್ ಸತತ 2 ಬಾರಿ ರನೌಟಾಗಿರುವ ಟೆಸ್ಟ್ ಆಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News