ಪಲಿಮಾರು ಪರ್ಯಾಯ ಮಹೋತ್ಸವದ ವೈಭವಯುತ ಮೆರವಣಿಗೆ: ಗಮನ ಸೆಳೆದ ಟ್ಯಾಬ್ಲೋ, ಜಾನಪದ ತಂಡ

Update: 2018-01-18 10:37 GMT

ಉಡುಪಿ, ಜ.18: ವಿಶಿಷ್ಟವಾದ ವಿದ್ಯುತ್ ದೀಪಾಲಂಕಾರ, ಸ್ವಾಗತ ಕಮಾನು ಗಳಿಂದ ಅಲಂಕೃತಗೊಂಡಿದ್ದ ನಗರದ ಪ್ರಮುಖ ರಸ್ತೆಯಲ್ಲಿ ಇಂದು ನಸುಕಿನ ವೇಳೆ ಸಾಗಿ ಬಂದ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯ ದ್ವಿತೀಯ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಗೆ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಸಾಕ್ಷಿಯಾದರು.

ಜೋಡುಕಟ್ಟೆಯಿಂದ ನಸುಕಿನ ವೇಳೆ 3ಗಂಟೆಗೆ ಆರಂಭಗೊಂಡ ಮೆರವಣಿಗೆ ಪಲಿಮಾರು ಮಠದ ಪಟ್ಟದ ದೇವರು, ಮಠಾಧೀಶರು, ವಿದ್ವಾಂಸರು, ನಾಡಿನ ಗಣ್ಯರು ಹಾಗೂ ಸಹಸ್ರಾರು ಭಕ್ತಾದಿಗಳೊಂದಿಗೆ ವೇದಘೋಷ ಪೂರ್ವಕವಾಗಿ ಕವಿ ಮುದ್ದಣ್ಣ ಮಾರ್ಗವಾಗಿ ಸಾಗಿ ಕನಕದಾಸ ರಸ್ತೆಯ ಮೂಲಕ ಮುಂಜಾನೆ 6 ಗಂಟೆಗೆ ಶ್ರೀೃಷ್ಣ ಮಠದ ರಥಬೀದಿ ತಲುಪಿತು.

ಮೆರವಣಿಗೆಯಲ್ಲಿ ಆಕರ್ಷಕವಾದ ಸುಮಾರು 15 ಕ್ಕೂ ಅಧಿಕ ಟ್ಯಾಬ್ಲೋಗಳು ಮತ್ತು 40ಕ್ಕೂ ಹೆಚ್ಚು ವರ್ಣಮಯ ಜಾನಪದ ಹಾಗೂ ಕಲಾತಂಡಗಳು, ವೈವಿದ್ಯಮಯ ಡೋಲು ಹಾಗೂ ವಾದ್ಯಗಳು ಅತ್ಯಾಕರ್ಷಕವಾಗಿದ್ದವು. ಹಲವು ಸಂಕೀರ್ತನೆ ಹಾಗೂ ಭಜನಾ ತಂಡಗಳು ಕೂಡ ಮೆರವಣಿಗೆಯುದ್ದಕ್ಕೂ ಭಕ್ತಿಯನ್ನು ಮೆರೆಯಿತು.

ಮಠದ ಆನೆ ‘ಸುಭದ್ರೆ’, ತಟ್ಟಿರಾಯ, ಬಿರುದಾವಳಿ, ಕುಂಬಾಶಿಯ ಕೊರಗರ ಡೋಲು, ಜನತಾ ವ್ಯಾಯಾಮ ಶಾಲಾ ತಾಲೀಮು ತಂಡದ ಸದಸ್ಯ ರಿಂದ ಬೆಂಕಿ ಜೊತೆ ವಿವಿಧ ರೀತಿಯ ಕಸರತ್ತು, ಟಿ.ಎಸ್. ಬ್ಯಾಂಡ್ ಸೆಟ್, ಕಟೀಲಿನ 10 ತಟ್ಟಿರಾಯ, ನಾಸಿಕ್ ಬ್ಯಾಂಡ್, ಕೊಂಬು, ಹೋಳಿ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಮೊಬೈಲ್ ಬ್ಯಾಂಡ್, ಕರಗ ಕೋಲಾಟ, ಸೋಮನ ಕುಣಿತ, ಮಂಗಳೂರು ಬೊಂಬೆ ತಂಡ, ಪೂಜಾ ಕುಣಿತ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಕಂಗೀಲು ನೃತ್ಯ, ಚಿಲಿಪಿಲಿ ಮತ್ತು ಕಲ್ಲಡ್ಕದ ಗೊಂಬೆಗಳು, ಯಕ್ಷಗಾನ ನೃತ್ಯ ಹಾಗೂ ಕಡಿಯಾಳಿಯ ಎ-ಒನ್ ಕಾಸ್ಟೂಮ್ ತಂಡ ವಿಶಿಷ್ಟ ರೀತಿಯ ವೇಷಗಳಾದ ವೈಟ್ ಪಿಜನ್, ಗೋಲ್ಡನ್ ಗರುಡ, ಪ್ಯಾರೋಟ್, ಬಟ್ಲರ್‌ಫ್ಲೈಗಳು ಆಕರ್ಷಕವಾಗಿದ್ದವು.

ಹುಲಿ ಕುಣಿತ, ನವಿಲು ಕುಣಿತ, ಭೀಮ, ಹರಿದ್ವಾರದ ಮುಖ್ಯಪ್ರಾಣ, ಮಧ್ವಾಚಾರ್ಯ, ವಾದಿರಾಜರು, ಶಮಂತಕಮಣಿ, ಶ್ರೀಕೃಷ್ಣ ಪಾರಿಜಾತ, ಸೀತಾರಾಮ ಲಕ್ಷ್ಮಣ ಹನುಮಂತ, ಶ್ರೀವಿದ್ಯಾಮಾನ್ಯರು ಪಲ್ಲಕ್ಕಿಯಲ್ಲಿ, ಮಹಾ ಲಿಂಗೇಶ್ವರ ಯಕ್ಷಗಾನ, ಅಖಂಡ ಭಜನೆ, ಶ್ರೀಕೃಷ್ಣ ಗರ್ಭಗುಡಿ ಚಿನ್ನದ ಮೇಲ್ಛಾವಣಿ, ವಿಷ್ಣುಸಹಸ್ರನಾಮ, ತುಳಸಿ ಅರ್ಚನೆಯ ಬೆಳ್ಳಿ ರಥ, ಮಹಾ ವಿಷ್ಣುಮೂರ್ತಿ ಪಂಚವಾದ್ಯ ಬಳಗದ ಟ್ಯಾಬ್ಲೊಗಳು ಕಣ್ಮನ ಸೆಳೆದವು.

ಉಡುಪಿ ಗಾಂಧಿ ಆಸ್ಪತ್ರೆಯ ಸ್ವಚ್ಛ ಭಾರತ್ ತಂಡ, ಮಠದ ವಾಲಗ, ನಡೆ ಚಪ್ಪರದ ಜೊತೆ ಗಜಾನನ ಚಂಡೆ, ಬೆಳ್ಕಳೆ ಚಂಡೆ ಬಳಗ, ಕೇರಳ ಚಂಡೆ, ಯೋಗದೀಪಿಕ ವಿದ್ಯಾರ್ಥಿಗಳ ಚಂಡೆ, ಪಂಚವಾದ್ಯ, ಪಡುಬಿದ್ರಿ, ಮಾರ್ಪಳ್ಳಿ ಚಂಡೆ ಬಳಗ, ಸ್ಯಾಕ್ಸೋಫೋನ್, ಜೋಗಿ ಸಮಾಜದ ಭಜನಾ ತಂಡ, ಇಸ್ಕಾನ್ ಭಜನಾ ತಂಡಗಳು ನೆರೆದ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳನ್ನು ಮೈಮರೆಯುವಂತೆ ಮಾಡಿದವು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವ ರಾಜ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮೊದಲಾದ ಗಣ್ಯರು ಮೆರವಣಿಗೆಯಲ್ಲಿ ಸಾಗಿ ಬಂದರು.

ಪಲ್ಲಕ್ಕಿಯಲ್ಲಿ ಸಾಗಿ ಬಂದ ಮಠಾಧೀಶರು

ಮೆರವಣಿಗೆಯ ಕೊನೆಯಲ್ಲಿ ಮೊದಲನೆಯದಾಗಿ ಪರ್ಯಾಯ ಪೀಠ ವನ್ನೇರಿದ ಪಲಿಮಾರು ಶ್ರೀವಿದ್ಯಾಧೀಶ ತೀರ್ಥರು, ನಂತರ ಕೃಷಾಪುರ ಶ್ರೀ ವಿದ್ಯಾಸಾಗರ ತೀರ್ಥ, ಅವರ ಹಿಂದೆ ಶಿರೂರು ಶ್ರೀಲಕ್ಷ್ಮೀವರ ತೀರ್ಥ, ಕಾಣಿಯೂರು ವಿದ್ಯಾವಲ್ಲಭ ತೀರ್ಥ, ಸೋದೆ ಶ್ರೀವಿಶ್ವವಲ್ಲಭ ತೀರ್ಥ, ಅದ ಮಾರು ಕಿರಿಯ ಶ್ರೀಈಶ ಪ್ರಿಯ ತೀರ್ಥ ಸ್ವಾಮೀಜಿ ಸಾಗಿ ಬಂದರು.

ಪಲಿಮಾರು, ಕೃಷ್ಣಾಪುರ, ಕಾಣಿಯೂರು ಸ್ವಾಮೀಜಿ ವಾಹನದಲ್ಲಿ ಇರಿಸಿದ್ದ ಪಲ್ಲಕಿಯಲ್ಲಿ ಕುಳಿತರೆ, ಶಿರೂರು ಸ್ವಾಮೀಜಿ ತೆರೆದ ಜೀಪಿನಲ್ಲಿ ಪೇಟ ಧರಿಸಿ ಕೊಂಡು ಬಂದರು. ಸೋದೆ ಹಾಗೂ ಅದಮಾರು ಕಿರಿಯ ಸ್ವಾಮೀಜಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭಕ್ತಾಧಿಗಳು ಹೊತ್ತುಕೊಂಡು ಬಂದರು. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅದಮಾರು ಹಿರಿಯ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮೆವಣಿಗೆಯಲ್ಲಿ ಗೈರು ಹಾಜರಾಗಿದ್ದರು.

ಮತ್ತೆ  ಉಡುಪಿಗೆ ಬಂದ ‘ಸುಭದ್ರೆ’

ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಕ್ರಬೈಲು ಆನೆ ಕ್ಯಾಂಪ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಶ್ರೀ ಕೃಷ್ಣ ಮಠದ ಆನೆ ‘ಸುಭದ್ರೆ’ ಇಂದಿನ ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರುಗು ನೀಡಿತು.

ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ಸುಭದ್ರೆಯನ್ನು 2015ರ ಡಿಸೆಂಬರ್‌ನಲ್ಲಿ ಸಕ್ರೆಬೈಲು ಕ್ಯಾಂಪ್‌ಗೆ ಸೇರಿಸಲಾಗಿತ್ತು. ಬಳಿಕ ಪೇಜಾವರ ಸ್ವಾಮೀಜಿಯ ಪಂಚಮ ಪರ್ಯಾಯ ಅವಧಿಯಲ್ಲಿ 2016ರ ಆಗಸ್ಟ್‌ನಲ್ಲಿ ಸುಭದ್ರೆಯನ್ನು ಮಠಕ್ಕೆ ತರಲಾಗಿತ್ತು. ಬಳಿಕ ಕೆಲವು ದಿನಗಳ ನಂತರ ಮತ್ತೆ ಸುಭದ್ರೆಯನ್ನು ಸಕ್ರೆಬೈಲಿಗೆ ಕರೆದುೊಂಡು ಹೋಗಲಾಗಿತ್ತು.

ಇದೀಗ ಸಂಪೂರ್ಣ ಗುಣಮುಖವಾಗಿರುವ ಸುಭದ್ರೆಯನ್ನು ಪರ್ಯಾಯದ ಹಿನ್ನೆಲೆಯಲ್ಲಿ ಜ.17ರಂದು ರಾತ್ರಿ ವೇಳೆ ಸಕ್ರೆಬೈಲಿನಿಂದ ಉಡುಪಿಗೆ ಕರೆತರ ಲಾಗಿದೆ. ಜೋಡುಕಟ್ಟೆಯಿಂದ ರಥಬೀದಿವರೆಗೆ ನಡೆದ ಮೆರವಣಿಗೆಯಲ್ಲಿ ಸುಭದ್ರೆ ಪಾಲ್ಗೊಂಡಿತ್ತು. ಇದರೊಂದಿಗೆ ಮಾವುತರಾದ ಮುಮ್ಮದ್ ಹಾಗೂ ಜಾನ್‌ಪಾಶ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News