ಜ.19ರಂದು ಗೋವಾದಲ್ಲಿ ಟ್ಯಾಕ್ಸಿ ಮುಷ್ಕರ

Update: 2018-01-18 12:43 GMT

ಪಣಜಿ, ಜ.18: ಟ್ಯಾಕ್ಸಿಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬ ಆದೇಶವನ್ನು ವಿರೋಧಿಸಿ ಹಾಗೂ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಪೀಡನೆಯನ್ನು ಖಂಡಿಸಿ ಗೋವಾದಲ್ಲಿ ಜ.19ರಂದು (ಶುಕ್ರವಾರ) ಟ್ಯಾಕ್ಸಿ ನಿರ್ವಾಹಕರು ಮುಷ್ಕರ ನಡೆಸಲಿದ್ದಾರೆ ಎಂದು ಉತ್ತರ ಗೋವಾ ಪ್ರವಾಸಿ ಟ್ಯಾಕ್ಸಿ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ವಿನಾಯಕ್ ನಾನೊಸ್ಕರ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ಸು ನಿಲ್ದಾಣ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಟ್ಯಾಕ್ಸಿ ಸೇವೆ ಲಭ್ಯವಾಗದು. ಜನವರಿ 19ರಂದು ಯಾವುದೇ ಟ್ಯಾಕ್ಸಿ ರಸ್ತೆಗಿಳಿಯದು ಎಂದು ವಿನಾಯಕ್ ತಿಳಿಸಿದ್ದಾರೆ. ಸ್ಪೀಡ್ ಗವರ್ನರ್ ಅಳವಡಿಸಲು ಟ್ಯಾಕ್ಸಿ ನಿರ್ವಾಹಕರಿಗೆ ಇಚ್ಛೆಯಿಲ್ಲ. ಆದರೆ ಸ್ಪೀಡ್ ಗವರ್ನರ್ ಪೂರೈಕೆದಾರರ ಒತ್ತಡಕ್ಕೆ ಮಣಿದಿರುವ ಸರಕಾರ ಇದನ್ನು ಕಡ್ಡಾಯಗೊಳಿಸಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ. ಯೂನಿಯನ್‌ಗಳು ಸರಕಾರಕ್ಕೆ ಯಾವುದೇ ನೋಟಿಸ್ ನೀಡದೆ ಮುಷ್ಕರಕ್ಕೆ ಮುಂದಾಗಿದ್ದು, ಇದು ಕಾನೂನುಬಾಹಿರ ಎಂದು ಗೋವಾ ಸಾರಿಗೆ ಸಚಿವ ಸುದಿನ್ ಧವಳಿಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ 18,000 ನೋಂದಾಯಿತ ಟ್ಯಾಕ್ಸಿಗಳಿದ್ದು, ಮುಷ್ಕರದ ಹಿನ್ನೆಲೆಯಲ್ಲಿ 1,000 ಬಸ್ಸುಗಳನ್ನು ವಿಶೇಷವಾಗಿ ನಿಯೋಜಿಸಲಾಗುವುದು ಎಂದವರು ತಿಳಿಸಿದ್ದಾರೆ.

 ಇದೇ ವೇಳೆ , ಮುಷ್ಕರ ನಡೆಸುವ ಸಂದರ್ಭ ಹಿಂಸಾಕೃತ್ಯದಲ್ಲಿ ನಿರತರಾದವರ ವಿರುದ್ಧ ಲೈಸೆನ್ಸ್ ಅಮಾನತು ಸೇರಿದಂತೆ ತೀವ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಮನೋಹರ್ ಪಾರಿಕ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News