ಚಳಿಗಾಲದ ಒಲಿಂಪಿಕ್ಸ್ ಮುನ್ನಾ ದಿನ ಬೃಹತ್ ಸೇನಾ ಪ್ರದರ್ಶನಕ್ಕೆ ಉ. ಕೊರಿಯ ಸಜ್ಜು

Update: 2018-01-18 15:02 GMT

ಸಿಯೋಲ್ (ದಕ್ಷಿಣ ಕೊರಿಯ), ಜ. 18: ದಕ್ಷಿಣ ಕೊರಿಯದೊಂದಿಗೆ ಅದ್ಭುತ ಕ್ರೀಡಾ ಬಾಂಧವ್ಯವನ್ನು ಬೆಸೆದ ಹೊರತಾಗಿಯೂ, ಮುಂದಿನ ತಿಂಗಳು ಆ ದೇಶದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಆರಂಭಗೊಳ್ಳುವ ಮುನ್ನಾ ದಿನ ತನ್ನ ಸೇನಾ ಶಕ್ತಿಯ ಬೃಹತ್ ಪ್ರದರ್ಶನವೊಂದನ್ನು ಏರ್ಪಡಿಸಲು ಉತ್ತರ ಕೊರಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಮಹತ್ವದ ಬೆಳವಣಿಗೆಯೊಂದರಲ್ಲಿ, ಚಳಿಗಾಲದ ಒಲಿಂಪಿಕ್ಸ್‌ಗೆ ತನ್ನ ಕ್ರೀಡಾಪಟುಗಳನ್ನು ಕಳುಹಿಸಲು ಹಾಗೂ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕೊರಿಯದೊಂದಿಗೆ ಜೊತೆಯಾಗಿ ಪಥ ಸಂಚಲನ ನಡೆಸಲು ಉತ್ತರ ಕೊರಿಯ ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ.

ಆದಾಗ್ಯೂ, ತನ್ನ ಸೇನೆಯ 70ನೆ ಸ್ಥಾಪನಾ ದಿನವನ್ನು ಆಚರಿಸಲು ಕೂಡ ಉತ್ತರ ಕೊರಿಯ ನಿರ್ಧರಿಸಿದೆ ಎಂದು ದಕ್ಷಿಣ ಕೊರಿಯದ ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರ ಭಾಗವಾಗಿ ಚಳಿಗಾಲದ ಒಲಿಂಪಿಕ್ಸ್ ಆರಂಭಗೊಳ್ಳುವ ಮುನ್ನಾ ದಿನದಂದು ಅಂದರೆ ಫೆಬ್ರವರಿ 8ರಂದು ಬೃಹತ್ ಸೇನಾ ಮೆರವಣಿಗೆ ಏರ್ಪಡಿಸಲು ಅದು ನಿರ್ಧರಿಸಿದೆ.

ರಾಜಧಾನಿ ಪ್ಯಾಂಗ್‌ಯಾಂಗ್ ಸಮೀಪದ ವಾಯು ನೆಲೆಯೊಂದರಲ್ಲಿ ಸುಮಾರು 12,000 ಸೈನಿಕರು ಪಥ ಸಂಚಲನ ನಡೆಸಲಿದ್ದಾರೆ ಹಾಗೂ ಫಿರಂಗಿಗಳು ಮತ್ತು ಇತರ ಶಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗುವುದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News