29 ಸರಕುಗಳ ಮೇಲಿನ ಜಿಎಸ್‌ಟಿ ದರ ಕಡಿತ

Update: 2018-01-18 17:03 GMT

 ಹೊಸದಿಲ್ಲಿ, ಜ.18: ಇ-ವೇ ಬಿಲ್ ಪದ್ಧತಿಗೆ ಚಾಲನೆ, ಜಿಎಸ್‌ಟಿ ರಿಟರ್ನ್ ಫೈಲಿಂಗ್ ಸರಳೀಕರಣಕ್ಕೆ ಸಂಬಂಧಿಸಿ ಇಂದು ನಡೆದ ಜಿಎಸ್‌ಟಿ ಸಭೆಯಲ್ಲಿ ಮಹತ್ವ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆದರೆ ಪೆಟ್ರೋಲಿಯಂನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನು ಸಭೆಯು ಮುಂದೂಡಿದೆ. 29 ಸರಕುಗಳ ಹಾಗೂ 53 ವಿಧದ ಸೇವೆಗಳ ಜಿಎಸ್‌ಟಿ ದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಕೆಲ ಕರಕುಶಲ ವಸ್ತುಗಳ ಜಿಎಸ್‌ಟಿ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ.

 ನೂತನ ದರಗಳು ಜನವರಿ 25ರಿಂದ ಜಾರಿಗೆ ಬರಲಿವೆಯೆಂದು ಜಿಎಸ್‌ಟಿ ಮಂಡಳಿಯ ಅಧ್ಯಕ್ಷ, ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 29 ವಿಧದ ಕರಕುಶಲ ವಸ್ತುಗಳನ್ನು ಶೂನ್ಯ ತೆರಿಗೆಯ ವ್ಯಾಪ್ತಿಗೆ ತರಲಾಗಿದೆ ಎಂದವರು ಹೇಳಿದ್ದಾರೆ.

ಇಂದು ನಡೆದ ಜಿಎಸ್‌ಟಿ ಮಂಡಳಿಯ 25ನೇ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

 ಜಿಎಸ್‌ಟಿಯಿಂದ ಹೊರತುಪಡಿಸಲಾದ ಪೆಟ್ರೋಲಿಯಂ ಮತ್ತಿತರ ಸಾಮಗ್ರಿ ಗಳನ್ನು, ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲಿಸ ಲಾಗುವುದೆಂದು ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಇದಕ್ಕೂ ಮುನ್ನ ನಡೆದ ಮಹತ್ವದ ಸಭೆಯಲ್ಲಿ ಜಿಎಸ್‌ಟಿ ದರ ಪರಿಷ್ಕರಣೆಗೆ ಸಂಬಂಧಿಸಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

   ಜಿಎಸ್‌ಟಿ ರಿಟರ್ನ್ ಫೈಲಿಂಗ್ ಮಾಡುವುದನ್ನು ಸರಳಗೊಳಿಸುವ ಬಗ್ಗೆ ಇಂದು ನಡೆದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ 10 ದಿನಗಳ ಬಳಿಕ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಿತಿಯ ಸಭೆ ನಡೆಯಲಿದ್ದು, ಆಗ ಈ ವಿಷಯವನ್ನು ಚರ್ಚಿಸಲಾಗುವುದು ಎಂದು ಜಿಎಸ್‌ಟಿ ಮಂಡಳಿಯ ಸದಸ್ಯ, ಉತ್ತರ ಖಂಡದ ವಿತ್ತ ಸಚಿವ ಪ್ರಕಾಶ್ ಪಂತ್ ತಿಳಿಸಿದ್ದಾರೆ.

   50 ಸಾವಿರಕ್ಕೂ ಅಧಿಕ ಮೊತ್ತದ ಸಾಮಗ್ರಿಗಳನ್ನು ರಾಜ್ಯಗಳ ನಡುವೆ ಸಾಗಾಟ ಮಾಡುವವರು ಇಲೆಕ್ಟ್ರಾನಿಕ್ ವೇ ಬಿಲ್‌ನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುವ ಜಿಎಸ್‌ಟಿ ನಿಯಮವು ಫೆಬ್ರವರಿ 1ರಿಂದ ಜಾರಿಗೆ ಬರಲಿದೆಯೆಂದು ಅವರು ತಿಳಿಸಿದ್ದಾರೆ. ಇದರಿಂದ ತೆರಿಗೆಗಳ್ಳತನ ತಡೆಯಲು ಸಾಧ್ಯವಾಗಲಿದೆಯೆಂದು ಜೇಟ್ಲಿ ತಿಳಿಸಿದ್ದಾರೆ.

ಜಿಎಸ್‌ಟಿ ಪರಿಷ್ಕೃತ ದರಪಟ್ಟಿ

► ಜಿಎಸ್‌ಟಿ ದರ ಶೇ.28ರಿಂದ ಶೇ.18ಕ್ಕೆ ಇಳಿಕೆ

 1.ಜೈವಿಕ ಅನಿಲದ ಮೂಲಕ ಓಡುವ ಬಸ್‌ಗಳು, 2. ಹಳೆಯ ಹಾಗೂ ಬಳಕೆಯಾದ ಮೋಟಾರು ವಾಹನಗಳು. 3. (ಮಧ್ಯಮ ಹಾಗೂ ದೊಡ್ಡ ಕಾರುಗಳು, ಎಸ್‌ಯುವಿಗಳು).

 ► ಶೇ.28ರಿಂದ ಶೇ.12ಕ್ಕೆ ಇಳಿಕೆ

ಮಧ್ಯಮ ಹಾಗೂ ದೊಡ್ಡ ಗಾತ್ರದ ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊರತುಪಡಿಸಿ, ಇತರ ಹಳೆಯ ಹಾಗೂ ಬಳಕೆಯಾದ ಮೋಟಾರು ವಾಹನಗಳು.

► ಜಿಎಸ್‌ಟಿ ದರ ಶೇ.18ರಿಂದ ಶೇ.12ಕ್ಕೆ ಇಳಿಕೆ

 ಸಕ್ಕರೆಯುಕ್ತ ಮಿಠಾಯಿ ಕನ್ಫೆಕ್ಷನರಿಗಳು 20 ಲೀಟರ್ ಬಾಟಲಿಯಲ್ಲಿನ ಕುಡಿಯುವ ನೀರು, ರಸಗೊಬ್ಬರ ದರ್ಜೆಯ ಫಾಸ್ಪರಿಕ್ ಆ್ಯಸಿಡ್, ಬಯೋ ಡಿಸೇಲ್, 12 ಶ್ರೇಣಿಗಳ ಜೈವಿಕ ಕೀಟನಾಶಕಗಳ , ಬಿದಿರು ನಿರ್ಮಾಣದ ಕಟ್ಟಡಗಳ ಜಾನರಿಗಳು, ಸ್ಪ್ರಿಂಕ್ಲರ್, ಲ್ಯಾಟೆರಲ್‌ಗಳು ಸೇರಿದಂತೆ ತುಂತುರು ನೀರಾವರಿ ವ್ಯವಸ್ಥೆ, ಯಾಂತ್ರಿಕ ಸ್ಪ್ರೇಯರ್.

► ಜಿಎಸ್‌ಟಿ ದರ ಶೇ.18ರಿಂದ ಶೇ.5ಕ್ಕೆ ಇಳಿಕೆ

ಹುಣಸೆ ಬೀಜದ ಹುಡಿ, ಕೋನ್‌ಗಳಲ್ಲಿರುವ ಮೆಹಂದಿ ಪೇಸ್ಟ್, ಖಾಸಗಿ ವಿತರಕರಿಂದ ಗೃಹಬಳಕೆಯ ಗ್ರಾಹಕರಿಗೆ ಪೂರೈಕೆಯಾಗುವ ಎಲ್‌ಪಿಜಿ. ಬಾಹ್ಯಾಕಾಶ ಉಡಾವಕ ವಾಹನಗಳು ಹಾಗೂ ಉಪಗ್ರಹಗಳು ಮತ್ತು ಪೇಲೋಡ್‌ಗಳ ನಿರ್ಮಾಣಕ್ಕೆ ಪೂರೈಕೆಯಾಗುವ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಮಾಗ್ರಿಗಳು, ಉಪಕರಣಗಳು,ಬಿಡಿಭಾಗಗಳು, ಟೂಲ್ಸ್, ಕಚ್ಚಾ ಸಾಮಗ್ರಿಗಳು.

 ► ಜಿಎಸ್‌ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆ: ವೆಲ್ವೆಟ್ ಫ್ಯಾಬ್ರಿಕ್, 

► ಜಿಎಸ್‌ಟಿ ದರ ಶೇ. 0.25ರಿಂದ ಶೇ.03, : ವಜ್ರಗಳು ಹಾಗೂ ಅಮೂಲ್ಯ ಹರಳುಗಳು.

► ಜಿಎಸ್‌ಟಿ ದರ ಶೇ.5ರಿಂದ ಶೇ.12ಕ್ಕೆ ಏರಿಕೆ: ಸಿಗರೇಟ್ ಫಿಲ್ಟರ್ ಸುರುಳಿಗಳು

► ಜಿಎಸ್‌ಟಿ ಶೂನ್ಯ ದರದಿಂದ ಶೇ. 5ಕ್ಕೆ ಏರಿಕೆಯಾದ ಸರಕು: ಅಕ್ಕಿ ಹೊಟ್ಟು (ಅಕ್ಕಿಹೊಟ್ಟಿನಿಂದ ತೆಗೆಯುವ ಎಣ್ಣೆಯನ್ನು ಹೊರತುಪಡಿಸಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News