ಜೊಕೊವಿಕ್, ಫೆಡರರ್, ಹಾಲೆಪ್ 3ನೇ ಸುತ್ತಿಗೆ ಲಗ್ಗೆ

Update: 2018-01-18 18:21 GMT

ಮೆಲ್ಬೋರ್ನ್, ಜ.18: ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್,ಹಾಲಿ ಚಾಂಪಿಯನ್ ರೋಜರ್ ಫೆಡರರ್, ಆಸ್ಟ್ರೇಲಿಯದ ಐದನೇ ಶ್ರೇಯಾಂಕದ ಆಟಗಾರ ಡೊಮಿನಿಕ್ ಥೀಮ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಗುರುವಾರ 2 ಗಂಟೆ, 45 ನಿಮಿಷಗಳ ನಡೆದ ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಫ್ರಾನ್ಸ್‌ನ ಗಾಯೆಲ್ ಮೊನ್‌ಫಿಲ್ಸ್‌ರನ್ನು 4-6, 6-3, 6-1,6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಮೊನ್‌ಫಿಲ್ಸ್ ವಿರುದ್ದ ಆಡಿರುವ ಎಲ್ಲ 15 ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡರು.

12 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಜೊಕೊವಿಕ್ ಮೂರನೇ ಸುತ್ತಿನಲ್ಲಿ ಸ್ಪೇನ್‌ನ 21ನೇ ಶ್ರೇಯಾಂಕದ ಅಲ್ಬರ್ಟ್ ರಾಮೊಸ್-ವಿನೊಲಸ್‌ರನ್ನು ಎದುರಿಸಲಿದ್ದಾರೆ.

 ಅರ್ಜೆಂಟೀನದ 12ನೇ ಶ್ರೇಯಾಂಕದ ಡೆಲ್ ಪೊಟ್ರೊ 3 ಗಂಟೆ, 45 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ರಶ್ಯದ ಕರೆನ್ ಖಚನೊವ್‌ರನ್ನು 6-4, 7-6(7/4),6-7(0/7),6-4 ಸೆಟ್‌ಗಳಿಂದ ಮಣಿಸಿದರು. 4 ವರ್ಷಗಳ ಬಳಿಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿರುವ ಡೆಲ್ ಪೊಟ್ರೊ ಮುಂದಿನ ಸುತ್ತಿನಲ್ಲಿ ಝೆಕ್‌ನ ಹಿರಿಯ ಆಟಗಾರ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.

 ಆಸ್ಟ್ರೇಲಿಯದ ಡೊಮಿನಿಕ್ ಥೀಮ್ ಅಮೆರಿಕದ ಕ್ವಾಲಿಫೈಯರ್ ಡೆನಿಸ್ ಕುಡ್ಲಾ ವಿರುದ್ಧ 3 ಗಂಟೆ, 48 ನಿಮಿಷಗಳ ಹೋರಾಟದಲ್ಲಿ 6-7(6/8), 3-6, 6-3, 6-2, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

► ಕೆರ್ಬರ್‌ಗೆ ಶರಪೋವಾ ಎದುರಾಳಿ

 ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ. 21ನೇ ಶ್ರೇಯಾಂಕದ ಕೆರ್ಬರ್ ಗುರುವಾರ ನಡೆದ ಪಂದ್ಯದಲ್ಲಿ ಕ್ರೊಯೇಷಿಯದ ಡೊನ್ನಾ ವೆಕಿಸ್‌ರನ್ನು ಒಂದು ಗಂಟೆ, 10 ನಿಮಿಷಗಳ ಹೋರಾಟದಲ್ಲಿ 6-4, 6-1ರಿಂದ ಸೋಲಿಸಿದರು. ಕೆರ್ಬರ್ ಮೂರನೇ ಸುತ್ತಿನಲ್ಲಿ ರಶ್ಯದ ಮರಿಯಾ ಶರಪೋವಾರನ್ನು ಎದುರಿಸಲಿದ್ದಾರೆ.

 ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಶರಪೋವಾ 14ನೇ ಶ್ರೇಯಾಂಕದ ಅನಸ್ಟಸಿಜಾ ಸೆವಾಸ್ಟೋವಾರನ್ನು 6-1, 7-6(7/4) ಸೆಟ್‌ಗಳಿಂದ ಸೋಲಿಸಿದ್ದಾರೆ. ಕೆರ್ಬರ್ 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು. ಸ್ಟೆಫಿಗ್ರಾಫ್ ಬಳಿಕ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಜರ್ಮನಿಯ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದರು. ಸ್ಟೆಫಿಗ್ರಾಫ್ 1999ರಲ್ಲಿ ಈ ಸಾಧನೆ ಮಾಡಿದ್ದರು.

2017ರ ಆರಂಭದಲ್ಲಿ ನಂ.1 ಆಟಗಾರ್ತಿಯಾಗಿದ್ದ ಕೆರ್ಬರ್ ವರ್ಷಾಂತ್ಯಕ್ಕೆ 21ನೇ ಸ್ಥಾನಕ್ಕೆ ಕುಸಿದಿದ್ದರು. ಈ ತಿಂಗಳು ನಡೆದ ಹೋಪ್‌ಮನ್‌ಕಪ್‌ನಲ್ಲಿ ಸತತ ಜಯ, ಸಿಡ್ನಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿದ ಕೆರ್ಬರ್ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ತಲುಪಿದ ರೊಮಾನಿಯಾ ಆಟಗಾರ್ತಿ ಸಿಮೊನಾ ಹಾಲೆಪ್ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಕನಸು ಕಾಣುತ್ತಿದ್ದಾರೆ. ಹಾಲೆಪ್ ಒಂದು ಗಂಟೆ, 5 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಎವ್‌ಜಿನಿ ಬೌಚರ್ಡ್ ವಿರುದ್ಧ 6-2, 6-2 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಶನಿವಾರ ನಡೆಯಲಿರುವ 3ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಶ್ರೇಯಾಂಕರಹಿತ ಲೌರೆನ್ ಡೇವಿಸ್‌ರನ್ನು ಎದುರಿಸಲಿದ್ದಾರೆ. ಝೆಕ್ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ 44 ನಿಮಿಷಗಳ ಎರಡನೇ ಸುತ್ತಿನ ಪಂದ್ಯದಲ್ಲಿ ಬ್ರೆಝಿಲ್‌ನ ಬೀಟ್ರಿಝ್ ಹಡ್ಡಾಡ್‌ರನ್ನು 6-1, 6-1 ನೇರ ಸೆಟ್‌ಗಳಿಂದ ಮಣಿಸಿದ್ದಾರೆ.

ಪ್ಲಿಸ್ಕೋವಾ ಮುಂದಿನ ಸುತ್ತಿನಲ್ಲಿ ಝೆಕ್‌ನ ಲೂಸಿ ಸಫರೋವಾರನ್ನು ಎದುರಿಸಲಿದ್ದಾರೆ. ಸಫರೋವಾ ರೊಮಾನಿಯದ ಸೊರಾನಾ ಸಿರ್ಸ್ಟಿ ಅವರನ್ನು 6-2, 6-4 ಅಂತರದಿಂದ ಸೋಲಿಸಿದ್ದಾರೆ.

ವಾವ್ರಿಂಕಗೆ ಆಘಾತಕಾರಿ ಸೋಲು

ಸ್ವಿಸ್ ಆಟಗಾರ ಸ್ಟ್ಯಾನ್ ವಾವ್ರಿಂಕ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ವಾವ್ರಿಂಕ 97ನೇ ರ್ಯಾಂಕಿನ ಅಮೆರಿಕ ಆಟಗಾರ ಟೆನ್ನಿಸ್ ಸ್ಯಾಂಡ್‌ಗ್ರೆನ್ ವಿರುದ್ಧ 2-6, 1-6, 4-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಸ್ಯಾಂಡ್‌ಗ್ರೆನ್ 3ನೇ ಸುತ್ತಿನಲ್ಲಿ ಜರ್ಮನಿಯ ಮ್ಯಾಕ್ಸಿಮಿಲಿಯನ್ ಮಾರ್ಟರರ್‌ರನ್ನು ಎದುರಿಸಲಿದ್ದಾರೆ.

ವಾವ್ರಿಂಕ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ 6 ತಿಂಗಳ ಬಳಿಕ ಮೊದಲ ಬಾರಿ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಿದ್ದಾರೆ. 3 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ವಾವ್ರಿಂಕ 2014ರಲ್ಲಿ ರಫೆಲ್ ನಡಾಲ್‌ರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷ ಸೆಮಿಫೈನಲ್‌ಗೆ ತಲುಪಿದ್ದ ವಾವ್ರಿಂಕ ತಮ್ಮದೇ ದೇಶದ ರೋಜರ್ ಫೆಡರರ್ ವಿರುದ್ಧ 5 ಸೆಟ್‌ಗಳ ಅಂತರದಿಂದ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News