ಜ. 21ರಂದು ಮಾಲೂರಿಗೆ ಪ್ರಜ್ಞಾಸಿಂಗ್

Update: 2018-01-18 18:34 GMT

ಮಾಲೂರು, ಜ. 18: ಗೋಹತ್ಯೆ ನಿಷೇಧ ಆಂದೋಲನ ಅಭಯಾಕ್ಷರ ಅಭಿಯಾನದ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಅಭಯ ಗೋಯಾತ್ರೆಯ ಸಮಾರೋಪ ಸಮಾರಂಭ  ಜ. 21ರಂದು ಮಾಲೂರು ಸಮೀಪದ ಗಂಗಾಪುರದಲ್ಲಿರುವ ಶ್ರೀ ರಾಘವೇಂದ್ರ ಗೋ ಆಶ್ರಮ ಆವರಣದಲ್ಲಿ ನಡೆಯಲಿದೆ.

ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‍ ಸ್ವಾಮಿ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಸ್ವಾಮಿ ಶ್ರೀ ವಿವೇಕಾನಂದ ಯೋಗ ಅನುಸಂಧಾನ ಕೇಂದ್ರದ ಕುಲಪತಿ ಎಚ್.ಆರ್.ನಾಗೇಂದ್ರ,  ಚಕ್ರವರ್ತಿ ಸೂಲಿಬೆಲೆ, ಸಂಸ್ಕೃತ ವಿವಿ ಕುಲಪತಿ ಡಾ. ಪದ್ಮಾ ಶೇಖರ್, ರಾಜಸ್ಥಾನದ ಪತ್ತಮೇಡ ಆಶ್ರಮದ ಶ್ರೀ ದತ್ತ ಶರಣಾನಂದಜಿ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸುವರು.

ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿ ಇದೀಗ ಜಾಮೀನಿನಲ್ಲಿ ಬಿಡುಗಡೆಯಾಗಿರುವ ಪ್ರಜ್ಞಾಸಿಂಗ್ ಠಾಕೂರ್ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. 

ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ- ಸಂವರ್ಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಳುವವರ್ಗದ ಮೇಲೆ ಒತ್ತಡ ಹೇರುವ ಬೃಹತ್ ಹಕ್ಕೊತ್ತಾಯದ ಅಂಗವಾಗಿ ಡಿಸೆಂಬರ್ 3ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿದ ಅಭಯ ಗೋಯಾತ್ರೆಗೆ ಅದ್ಭುತ ಬೆಂಬಲ ವ್ಯಕ್ತವಾಗಿದ್ದು, ಈ ಜನಾಂದೋಲನವನ್ನು ಮನೆ- ಮನಗಳಿಗೆ ತಲುಪಿಸುವಲ್ಲಿ ಅಭಯ ಮಂಗಲ ಮಹತ್ವದ ಪಾತ್ರ ವಹಿಸಲಿದೆ ಹಾಗು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ತಜ್ಞರು, ಗಣ್ಯರು, ಗೋ ಸಂಶೋಧಕರು, ಗವ್ಯ ಚಿಕಿತ್ಸಾ ತಜ್ಞರು, ಗೋಪರ ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

ಹಾಲುಹಬ್ಬ

ಗೋಪೂಜೆ, ಗೋಗ್ರಾಸ, ಗೋ ವಿಚಾರ, ಪ್ರಸ್ತುತಿ, ಅಭಯಾಕ್ಷರ, ಗೋಕಲೆ, ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ರಥಯಾತ್ರೆಯನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ಇದಾಗಿದೆ.  ಸಭಿಕರಿಗೆ ಪರಿಶುದ್ಧ ದೇಸಿಹಾಲಿನ ಅಮೃತ ಸವಿಯುವ ಅವಕಾಶ, ಗೋ ಪೂಜೆಯ ಅವಕಾಶವಿದೆ. ಗೋಸಂರಕ್ಷಣೆಗೆ ನಾಡನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದು ಬೃಹತ್ ಜನಾಂದೋಲನವಾಗಿ ಬೆಳೆದಿದೆ. ಗೋವಿನ ಹಿರಿಮೆ ಬಗ್ಗೆ ವಿಶೇಷ ಮಾಹಿತಿ, ಗೋಮಾತೆಗೆ ಅಭಯ ನೀಡುವ ಸಂಕಲ್ಪಕ್ಕೆ ಸಹಿ ಮಾಡುವ ಅಭಯಾಕ್ಷರ, ಗೋವಿನ ಹಿರಿತನ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ವಿವಿಧ ಗವ್ಯೋತ್ಪನ್ನಗಳ, ದೆಸಿ ಹಾಲು- ತುಪ್ಪದಿಂದ ತಯಾರಿಸಿದ ಸಿಹಿ ತಿನಸು, ಪುಸ್ತಕ, ಸಿ.ಡಿ. ಪ್ರದರ್ಶನ ಮತ್ತು ಮಾರಾಟವೂ ಇವೆ. ಕಾರ್ಯಕ್ರಮಕ್ಕೆ ಮುನ್ನ ಸುತ್ತಮುತ್ತಲು ಗೋರಥ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News